ಶಕ್ತಿ ಯೋಜನೆ ಬೇಡ ಅನ್ನುವವರು ಬಸ್‌ನಲ್ಲಿ ಹಣ ಕೊಟ್ಟು ಪ್ರಯಾಣ ಮಾಡಲಿ : ಸಚಿವ ಶಿವಾನಂದ ಪಾಟೀಲ್ ಹಾವೇರಿ :ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡುವ ಶಕ್ತಿ ಯೋಜನೆ ಬೇಡ ಎನ್ನುವವರು ಬಸ್‌ನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡಲಿ. ಅಂತವರು ಬಸ್ಸಿನಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂರರಲ್ಲಿ 90 ಜನರಿಗೆ ಅವಶ್ಯಕತೆ ಇದ್ದಾಗ 10 ಜನರಿಗೆ ಅವಶ್ಯಕತೆ ಇರುವುದಿಲ್ಲ. ಆ 10 ಜನ ಅದರ ಬಗ್ಗೆ ಮಾತನಾಡುವುದು ಸಹಜ. ವಿದ್ಯುತ್ ವಿಚಾರದಲ್ಲಿ ಶೇ.82ರಷ್ಟು ಜನರು 50 ಯೂನಿಟ್ ವಿದ್ಯುತ್ ಮಾತ್ರ ಬಳಸುತ್ತಾರೆ. ಶೇ.13ರಷ್ಟು ಜನ 100 ರಿಂದ 150 ಯುನಿಟ್ ಬಳಸುತ್ತಾರೆ. ಅವಶ್ಯಕತೆ ಇದ್ದಲ್ಲಿ ಮಾತ್ರ ಯೋಜನೆಗಳು ಜಾರಿಗೆ ಬರುತ್ತವೆ ಎಂದು ಹೇಳಿದರು.
ವಿದ್ಯುತ್ ದರ ಏರಿಕೆ ಕುರಿತಂತೆ ಮಾತನಾಡಿದ ಅವರು, ವಿದ್ಯುತ್ ದರ ಪ್ರತಿವರ್ಷ ಪರಿಷ್ಕರಣೆ ಮಾಡಲಾಗುತ್ತದೆ. ಕೆಇಆರ್‌ಸಿಯವರು ವಿದ್ಯುತ್ ದರ ನಿರ್ಣಯ ಮಾಡುತ್ತಾರೆ. ಕಳೆದ ಸರ್ಕಾರವಿದ್ದಾಗಲೇ ವಿದ್ಯುತ್ ದರ ಪರಿಷ್ಕರಣೆಯಾಗಿತ್ತು. ಕೆಇಆರ್‌ಸಿ ಆ ಸರ್ಕಾರವಿದ್ದಾಗ ಜಾರಿ ಮಾಡಬೇಕಿತ್ತು. ಆದರೆ ಅವರು ಜಾರಿ ಮಾಡದ ಕಾರಣ ಗೊಂದಲ ಸೃಷ್ಟಿಯಾಗಿದೆ. ಏಪ್ರಿಲ್ ಬಿಲ್ ಕಟ್ಟಿಲ್ಲ, ಮೇ ತಿಂಗಳ ಬಿಲ್ ಕಟ್ಟಿಲ್ಲ. ಎರಡು ತಿಂಗಳ ಬಿಲ್ ಸೇರಿಸಿ ಕೊಟ್ಟಿರುವುದರಿಂದ ಕರೆಂಟ್ ಬಿಲ್ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿ ಬಂದಿದೆ. ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಹಾವೇರಿ ಜಿಲ್ಲೆ ಈ ಹಿಂದೆ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಕಂಡಿದೆ. ಇನ್ನು ಆರು ತಿಂಗಳು ಕಳೆದ ಬಳಿಕ ನೋಡಿ ಜಿಲ್ಲೆಯ ಸ್ಥಿತಿಯನ್ನು ನೋಡಿ. ಸದ್ಯ ಜಿಲ್ಲೆಯ ಹಲವು ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ನಾನು ಸಾರ್ವಜನಿಕವಾಗಿ ಏನೆಲ್ಲಾ ತಿಳಿದುಕೊಳ್ಳಬೇಕಿತ್ತೋ ಅದನ್ನು ತಿಳಿದುಕೊಂಡಿದ್ದೇನೆ. ಹಿಂದಿನ ಸಚಿವರಿಂದ ತಪ್ಪಾಗಿದ್ದರೆ, ಇನ್ನು ಯಾವುದೇ ರೀತಿಯ ತಪ್ಪುಗಳು ಆಗದಂತೆ ನಾನು ಭರವಸೆ ನೀಡುತ್ತೇನೆ ತಿಳಿಸಿದರು. ಸಾರ್ವಜನಿಕರಿಗೆ ಅವಶ್ಯಕತೆ ಇದ್ದಾಗ ಮಾತ್ರ ಸರ್ಕಾರ ಈ ರೀತಿ ಯೋಜನೆ ಜಾರಿಗೆ ತರುತ್ತದೆ. ಈ ಬಗ್ಗೆ ಪರ ವಿರೋಧಗಳು ವ್ಯಕ್ತವಾಗುತ್ತದೆ. ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾರೆ. ಹಾಗಾಗಿ ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡಬಾರದು ಎಂದು ಇದೆಯಾ ಪ್ರಶ್ನಿಸಿದರು.
ಈರುಳ್ಳಿಯನ್ನು ಹೊರತುಪಡಿಸಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ಈರುಳ್ಳಿ ಬೆಳೆದ ರೈತರಿಗೆ ಮಾತ್ರ ಸಮಸ್ಯೆಯಾಗಿದೆ. ಮೂರು ಕೃಷಿ ಕಾಯ್ದೆಯನ್ನು ನೂರಕ್ಕೆ ನೂರರಷ್ಟು ವಾಪಸ್ ತೆಗೆದುಕೊಳ್ಳುತ್ತೇವೆ ಎಂದರು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ಮೇಲೆ ಮಾಡಿರುವ ಆರೋಪಕ್ಕೆ ಸಾಕ್ಷಿಗಳನ್ನು ನೀಡಲಿ. ಅವರು ವಿರೋಧ ಪಕ್ಷದಲ್ಲಿರುವಾಗ ಆರೋಪ ಮಾಡುವುದು ಸಹಜ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ :Congress Guarantee Scheme: ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಲಿದೆ: ಸಚಿವ ಹೆಚ್ ಕೆ ಪಾಟೀಲ್