ಹಾವೇರಿ: ಸಮ್ಮೇಳನ ವಿಚಾರವಾಗಿ ತೊಂದರೆ ನೀಡಬೇಕು ಎಂದು ನನ್ನ ಬಗ್ಗೆ ಆರೋಪಗಳು ಮಾಡಲಾಗುತ್ತಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಷಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಕುತಂತ್ರದ ಉದ್ದೇಶದಿಂದ ಈ ರೀತಿ ಆರೋಪ ಮಾಡುತ್ತಿರುವವರೆಲ್ಲಾ ಹಾವೇರಿಯ ವಿರೋಧಿಗಳು ಎಂದು ಜೋಶಿ ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ತೊಂದರೆಯಾಗಬೇಕು ಎಂಬ ಕುತಂತ್ರದಿಂದ ಈ ರೀತಿ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಾನು ಗೋವಿಂದ ಭಟ್ಟರ ಮರಿಮೊಮ್ಮಗನಲ್ಲ ಎಂದು ಹೇಳಲು ಏನು ಅಧಿಕಾರವಿದೆ ಎಂದು ಮಹೇಶ್ ಜೋಷಿ ಪ್ರಶ್ನಿಸಿದರು. ಈ ರೀತಿ ಆರೋಪ ಮಾಡುತ್ತಿರುವುದು ಸಂತ ಶಿಶುನಾಳ ಶರೀಫರಿಗೆ ಮತ್ತು ಗುರು ಗೋವಿಂದ ಭಟ್ಟರಿಗೆ ಅವರಿಗೆ ಅವಮಾನಿಸಿದ ಹಾಗೆ ಎಂದು ಜೋಷಿ ಆರೋಪಿಸಿದರು. ಹಲವು ದಶಕಗಳ ಹಿಂದೆ ಇದ್ದ ಗುರು ಗೋವಿಂದ ಭಟ್ಟರನ್ನ ಮತ್ತು ಶಿಶುನಾಳ ಶರೀಫ ಅವರನ್ನು ಜನ ಆಡಿಕೊಂಡಿದ್ದರು. ಅಂತದರಲ್ಲಿ ನನ್ನನ್ನ ಈ ಜನ ಬಿಡುತ್ತಾರ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಬೇಸರ ವ್ಯಕ್ತಪಡಿಸಿದರು.
ನಾನು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಅಂದಿನಿಂದ ನಾನು ಶಿಶುನಾಳ ಶರೀಫರ ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎಂದು ಹೇಳುತ್ತಾ ಬಂದಿದ್ದೇನೆ. ಈ ರೀತಿ ಆರೋಪ ಮಾಡುತ್ತಿರುವವರು ಕ್ಷುಲ್ಲಕ ಮಾನವರು. ಈ ರೀತಿಯ ಜನಗಳಿಗೆ ಸ್ವತಃ ಶಿಶುನಾಳ ಶರೀಫರೇ ಕ್ಷುಲ್ಲಕ ಮಾನವರು ಎಂದಿದ್ದಾರೆ. ಅಂತಹುದರಲ್ಲಿ ನಾನು ಶರೀಫರ ಅನುಯಾಯಿ, ನಾನು ಸಹ ಅವರಿಗೆ ಕ್ಷುಲ್ಲಕ ಮಾನವರು ಎನ್ನುತ್ತೇನೆ ಎಂದು ಮಹೇಶ ಜೋಶಿ ಹೇಳಿದರು.