ಹಾವೇರಿ: ಸವಣೂರು ತಾಲೂಕಿನ ಹೋಬಳಿ ಕೇಂದ್ರವಾಗಿರುವ ಹತ್ತಿಮತ್ತೂರು 10 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಪ್ರದೇಶ. ಆದರೆ ಈ ಗ್ರಾಮದಲ್ಲಿ ಸೂಕ್ತ ವ್ಯವಸ್ಥೆಯುಳ್ಳ ಸ್ಮಶಾನವಿಲ್ಲ. ಇದರಿಂದಾಗಿ ಗ್ರಾಮಸ್ಥರು ತಮ್ಮ ತಮ್ಮ ಜಮೀನುಗಳಲ್ಲಿ ಶವಗಳ ಅಂತ್ಯಕ್ರಿಯೆ ನಡೆಸಿದರೆ, ಜಮೀನು ಇಲ್ಲದವರು ರಸ್ತೆ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ.
ಹತ್ತಿಮತ್ತೂರು ಗ್ರಾಮದಲ್ಲಿ ಸರ್ಕಾರ ಸರ್ವೇ ನಂಬರ್ 163ರಲ್ಲಿ ಎರಡು ಎಕರೆ ಜಮೀನನ್ನು ಸಾರ್ವಜನಿಕರ ರುದ್ರಭೂಮಿಗಾಗಿ ಮೀಸಲಿಟ್ಟಿದೆ. 2018-2019ರಲ್ಲಿಯೇ ಸರ್ಕಾರ ರುದ್ರಭೂಮಿಗೆ ಜಾಗ ಗುರುತಿಸಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುದ್ರಭೂಮಿ ನಿರ್ವಹಣೆ ಮಾಡತಕ್ಕದ್ದು ಎಂದು ಆದೇಶ ನೀಡಿದೆ. ಆದರೆ ಸರ್ಕಾರ ಗುರುತಿಸಿರುವ ರುದ್ರಭೂಮಿ ಈವರೆಗೆ ಅಭಿವೃದ್ಧಿ ಕಂಡಿಲ್ಲ. ರುದ್ರಭೂಮಿ ಸುಧಾರಣೆಯಾಗದ ಕಾರಣ ಯಾರೂ ಅಲ್ಲಿಗೆ ಶವ ತಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸುವುದಿಲ್ಲ. ಸ್ಮಶಾನಕ್ಕೆ ಮೀಸಲಿಟ್ಟಿರುವ ಎಕರೆ ಜಮೀನನ್ನು ಅಭಿವೃದ್ಧಿ ಮಾಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದಾರೆ.