ಹಾವೇರಿ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಮಧ್ಯೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಸಾರಿಗೆ ಬಸ್ ಕೆಳ ಸೇತುವೆಯಲ್ಲಿ ಸಿಲುಕಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಹಾವೇರಿ ಜಿಲ್ಲೆಯ ಸವಣೂರಿಗೆ ಬಸ್ ಹೊರಟಿತ್ತು. ಯಲವಿಗಿ ರೈಲು ಕೆಳ ಸೇತುವೆಯಲ್ಲಿ ನೀರು ನಿಂತಿದ್ದರೂ ಚಾಲಕ ಬಸ್ ಚಲಾಯಿಸಿದ್ದಾನೆ ಎನ್ನಲಾಗ್ತಿದೆ. ಪರಿಣಾಮ ಸೇತುವೆ ಮಧ್ಯದಲ್ಲಿ ಬಸ್ ನೀರಿನಲ್ಲಿ ಸಿಲುಕಿಕೊಂಡಿದೆ. ಬಸ್ ನೀರಲ್ಲಿ ಸಿಲುಕುತ್ತಿದ್ದಂತೆ ಪ್ರಯಾಣಿಕರು ಬಸ್ನಿಂದ ಇಳಿದು ಮೇಲೆ ಬಂದಿದ್ದಾರೆ. ಬಳಿಕ ಸ್ಥಳೀಯರು ಟ್ರ್ಯಾಕ್ಟರ್ ಸಹಾಯದಿಂದ ಬಸ್ನ್ನು ಮೇಲಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಮರದ ಟೊಂಗೆ ಕತ್ತರಿಸಿ ಸಂಚಾರಕ್ಕೆ ಅನುವು:ಇನ್ನೊಂದಡೆ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದ ಮರದ ಟೊಂಗೆಗಳನ್ನ ಆಡೂರು ಪೊಲೀಸ್ ಠಾಣೆಯ ಪಿಎಸ್ಐ ಗಡ್ಡೆಪ್ಪ ಗುಂಜಟಗಿ ಅವರು ಕತ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟ ಘಟನೆ ಹಾನಗಲ್ ತಾಲೂಕು ಆಡೂರು ಗ್ರಾಮದ ಬಳಿ ನಡೆದಿದೆ. ಹಾವಣಗಿ ಮತ್ತು ಬಾಳಂಬೀಡ ಗ್ರಾಮದ ಮಧ್ಯದಲ್ಲಿ ಭಾರಿ ಮಳೆ ಗಾಳಿಗೆ ಮರಗಳು ರಸ್ತೆಗುರುಳಿದ್ದವು. ಮರಗಳು ರಸ್ತೆಗೆ ಬಿದ್ದಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು.