ಹಾವೇರಿ: ಜಿಲ್ಲೆಯಲ್ಲಿ ಅದ್ಧೂರಿಯಾಗಿ ಬುಧವಾರ ಹೋರಿಯೊಂದರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ದನಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕಲ್ಲೇದೇವರ ಕಲ್ಮೇಶ್ವರ ಎಂಬ ಹೋರಿಯನ್ನು ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದ ಮಲ್ಲಪ್ಪ ಕಡಮ್ಮನವರ್ ತಂದು ನಿನ್ನೆಗೆ ಒಂದು ವರ್ಷ ತುಂಬಿದೆ. ಈ ಹಿನ್ನೆಲೆ ಇದೇ ದಿನವನ್ನು ಹೋರಿಯ ಬರ್ತ್ಡೇಯಾಗಿ ಆಚರಿಸಲಾಗಿದೆ.
ಹೋರಿಯ ಹಿನ್ನೆಲೆ ಹೀಗಿದೆ: ಮಲ್ಲಪ್ಪ ಕಡಮ್ಮನವರ್ ಗ್ರಾಮದ ಸಾಮಾನ್ಯ ರೈತರಲ್ಲಿ ಒಬ್ಬರು. ಇವರು ತಮ್ಮ ಜಮೀನಿನಲ್ಲಿ ಕೃಷಿಗಾಗಿ ಬಸವನಹಳ್ಳಿಯಿಂದ ಹೋರಿಯನ್ನು ತಂದಿದ್ದರು. ಮಲ್ಲಪ್ಪನ ಮಕ್ಕಳು ಕೃಷಿ ಚಟುವಟಿಕೆಗಾಗಿ ತಂದಿದ್ದ ಹೋರಿಯ ಬಗ್ಗೆ ತೀವ್ರ ಆಸಕ್ತಿ ತೋರಿಸಿದರು. ಹೋರಿ ನೋಡಲು ಬಹಳ ಕಟ್ಟುಮಸ್ತಾಗಿದ್ದರಿಂದ ದನಬೆದರಿಸುವ ಸ್ಪರ್ಧೆಯಲ್ಲಿ ಬಿಟ್ಟರೆ ಹೇಗಿರುತ್ತೆ ಎಂದು ಸ್ನೇಹಿತರೆಲ್ಲಾ ಸೇರಿಕೊಂಡು ಸ್ಪರ್ಧೆಯಲ್ಲಿ ಬಿಟ್ಟರು. ಅಲ್ಲಿಂದ ಈ ಹೋರಿಯ ಚಿತ್ರಣವೇ ಬದಲಾಗಿ ಹೋಯಿತು.
ಕೃಷಿಗಾಗಿ ತಂದ ಹೋರಿ ದನಬೆದರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಬಂಪರ್ ಬಹುಮಾನಗಳಿಸಿತು. ಇದಕ್ಕೆ ಕಲ್ಲೇದೇವರ ಕಲ್ಮೇಶ್ವರ ಎಂದು ನಾಮಕರಣ ಮಾಡಲಾಯಿತು. ಬಳಿಕ ದನಬೆದರಿಸುವ ಸ್ಪರ್ಧೆಗೆ ಕಲ್ಮೇಶ್ವರನನ್ನು ಸಿದ್ಧಪಡಿಸಲಾಯಿತು. ಹೋರಿ ಭಾಗವಹಿಸಿದ ಸ್ಪರ್ಧೆಗಳಲ್ಲಿ ಬಹುಮಾನ ಗ್ಯಾರಂಟಿ ಎನ್ನುವಂತಾಯಿತು. ಜಮೀನಿನಲ್ಲಿ ಉಳುಮೆ ಮಾಡಿರಬೇಕಾಗಿದ್ದ ಹೋರಿ ಸಾವಿರಾರು ಅಭಿಮಾನಿಗಳ ಮನಸ್ಸು ಗೆದ್ದಿತು. ಅಷ್ಟೇ ಅಲ್ಲದೆ ತನ್ನದೇಯಾದ ಸ್ಟೈಲ್‌ನಿಂದ ಸ್ಪರ್ಧೆಯ ಆಖಾಡದಲ್ಲಿ ಹೆಸರು ಮಾಡಿತು.
ನಿನ್ನೆಗೆ ಹೋರಿಯನ್ನು ತಂದು ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮಲ್ಲಪ್ಪ ಮತ್ತು ಮಕ್ಕಳು ಹೋರಿಯ ಹುಟ್ಟುಹಬ್ಬ ಆಚರಿಸಿದರು. ವಿವಿಧ ವಸ್ತುಗಳಿಂದ ಅಲಂಕಾರ ಮಾಡಿದ ಹೋರಿಯನ್ನು ಕಲ್ಮೇಶ್ವರ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ನಂತರ ಪಟಾಕಿ ಸದ್ದಿನೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮನೆಗೆ ಬಂದ ಕಲ್ಮೇಶ್ವರ ಹೋರಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ಮನೆಯ ಮುಂದೆ ನಡೆದ ಜನ್ಮದಿನಾಚರಣೆಯಲ್ಲಿ ಗ್ರಾಮದ ನೂರಾರು ರೈತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಹೋರಿಗಾಗಿ ತಂದಿದ್ದ ಮಾಲೆಯನ್ನು ಹಾಕಿ 5 ಕೆಜಿ ತೂಕದ ಕೇಕ್ ತಿನ್ನಿಸಿ ಸಂಭ್ರಮಿಸಿದರು.