ಹಾವೇರಿ:ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಹಾವೇರಿ ವಿಶೇಷ ಸತ್ರ ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಪರಾಧಿ ಅಸ್ಫಾಕ ಚಮನಸಾಬ್ ಕೋಟಿ ಎಂಬಾತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಗೆ ಆಮಿಷ ತೋರಿಸಿ ಪುಸಲಾಯಿಸಿ ದುಷ್ಕೃತ್ಯ ಎಸಗಿದ್ದ. ಬಾಲಕಿ ಗರ್ಭಿಣಿಯಾಗಿದ್ದಳು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು. ಹಾನಗಲ್ ಸಿಪಿಐ ಎಸ್.ಆರ್.ಗಣಾಚಾರಿ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಐಪಿಸಿಯ ವಿವಿಧ ಕಲಂಗಳು ಮತ್ತು ಪೋಕ್ಸೋ ಕಾಯ್ದೆ 2012ರಡಿ ಆಪಾದನೆ ರುಜುವಾತಾದ ಹಿನ್ನೆಲೆಯಲ್ಲಿ ಅಸ್ಫಾಕ ಚಮನಸಾಬ್ ಕೋಟಿಗೆ ದಂಡಸಮೇತ ಶಿಕ್ಷೆ ವಿಧಿಸಿ ನ್ಯಾಯಾಧೀಶ ನಿಂಗನಗೌಡ ಪಾಟೀಲ್ ಆದೇಶಿಸಿದರು. ದಂಡದ ಹಣದಲ್ಲಿ 1 ಲಕ್ಷ ರೂಪಾಯಿಯನ್ನು ಸಂತ್ರಸ್ತ ಬಾಲಕಿಗೆ ಮತ್ತು ನೊಂದವರ ಪರಿಹಾರ ಯೋಜನೆಯಡಿ ಇರುವ ಪರಿಹಾರ ನಿಧಿಗೆ ನಾಲ್ಕು ಲಕ್ಷ ರೂಪಾಯಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್ ಶಂಕರಗೌಡ ಪಾಟೀಲ್ ವಾದ ಮಂಡಿಸಿದ್ದರು.