ಹಾವೇರಿ:ಸತತ ಐದು ದಿನಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಇನ್ನೊಂದೆಡೆ ಶಿವಮೊಗ್ಗದಿಂದ ಬರುವ ಕುಮದ್ವತಿ ನದಿ ಕೆರೆಗಳನ್ನ ತುಂಬಿಸಿ ಹೊರನುಗ್ಗುತ್ತಿದೆ. ಇಲ್ಲಿ ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗರೆದು ಹರಿಯುತ್ತಿದೆ.
ಮೈದುಂಬಿ ಹರಿಯುತ್ತಿರುವ ಕುಮದ್ವತಿ ನದಿ... ಭೋರ್ಗರೆಯುತ್ತಿದೆ ಸುಂದರ ಜಲಪಾತ
ಹಾವೇರಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಇಂದು ಕಡಿಮೆಯಾಗಿದೆ. ಜಿಲ್ಲೆಯ ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ನದಿಗಳ ಹರಿವಿನಲ್ಲೂ ಸ್ವಲ್ಪಮಟ್ಟದ ಇಳಿಕೆಯಾಗಿದೆ. ಈ ನಡುವೆ ಇಲ್ಲಿನ ಕುಮದ್ವತಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಹುಟ್ಟುವ ಜಲಪಾತವೊಂದು ಭೋರ್ಗರೆಯುತ್ತಿದೆ.
ಭಾರಿ ಮಳೆಗೆ ಜಿಲ್ಲೆಯ ಹೆಗ್ಗೇರಿ, ಆಣೂರಿನ ಕೆರೆಗಳು ತುಂಬಿದ್ದು, ರಟ್ಟಿಹಳ್ಳಿ ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆರೆ ಕೂಡ ಭರ್ತಿಯಾಗಿದೆ. ಶಿವಮೊಗ್ಗದಿಂದ ಹರಿದು ಬರುವ ಈ ಕುಮದ್ವತಿ ನದಿ ಕೆರೆಯನ್ನ ತುಂಬಿಸಿ ಹೊರನುಗ್ಗುತ್ತಿದೆ. ಇಲ್ಲಿ ಮಳೆಗಾಲದಲ್ಲಿ ನಿರ್ಮಾಣವಾಗುವ ಜಲಪಾತ ಇದೀಗ ಭೋರ್ಗೆರೆಯುತ್ತಿದೆ. ಕುಮದ್ವತಿ ನದಿಯಿಂದ ನಿರ್ಮಾಣವಾಗುವ ಈ ಜಲಪಾತ ಮಳೆ ನೀರಿನಿಂದ ತುಂಬಿ ಹರಿಯುತ್ತಿದೆ.
ಕೆರೆಯಿಂದ ಮರುಹುಟ್ಟು ಪಡೆಯುವ ಕುಮದ್ವತಿ ನದಿ ರಟ್ಟಿಹಳ್ಳಿ, ಹಿರೇಕೆರೂರು ಸೇರಿದಂತೆ ಹಲವು ಗ್ರಾಮಗಳ ರಸ್ತೆಗಳನ್ನು ಆಪೋಷನ ತೆಗೆದುಕೊಂಡಿದೆ. ತುಂಬಿದ ಮದಗಮಾಸೂರು ಕೆರೆ, ಅದರಿಂದ ಮರುಜೀವ ಪಡೆಯುವ ಜಲಪಾತ, ಅರಣ್ಯ ಇಲಾಖೆ ನಿರ್ಮಿಸಿದ ಸಸ್ಯೋದ್ಯಾನ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.