ಹಾವೇರಿ:ತೆಲಂಗಾಣ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶತಾಗತಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಆದರೆ, ಇವರ ವಿರುದ್ಧ ಪ್ರಚಾರ ನಡೆಸಲು ಇದೀಗ ಹಾವೇರಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ನ.21ರಂದು ತೆಲಂಗಾಣ ಚಲೋ ಕೈಗೊಳ್ಳಲಿದ್ದಾರೆ.
''ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಇಂದಿರಾ ಪಾರ್ಕ್ನಲ್ಲಿ ರೈತ ಸಂಘಟನೆಗಳು ಸಮಾವೇಶ ಆಯೋಜಿಸಲಿವೆ. ಕಾಂಗ್ರೆಸ್ ಕರ್ನಾಟಕದಲ್ಲಿ ಚುನಾವಣೆಗೆ ಪೂರ್ವ ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿತ್ತು. ಅಲ್ಲದೇ ಪ್ರಣಾಳಿಕೆಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ತಗೆದುಕೊಳ್ಳುವುದಾಗಿ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಹ ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ರೈತರಿಗೆ ಮಾರಕವಾದ ಕಾಯ್ದೆಗಳನ್ನು ವಾಪಸ್ ತಗೆದುಕೊಳುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತೆಲಂಗಾಣಕ್ಕೆ ಹೋಗಿ ಕರ್ನಾಟಕದಲ್ಲಿ ತಮ್ಮ ಪಕ್ಷ ನೀಡಿದ ಐದು ಗ್ಯಾರಂಟಿ ಈಡೇರಿಸಿದೆ ಎನ್ನುತ್ತಿದ್ದಾರೆ".
"ಅಲ್ಲದೆ ರೈತರ ಸುಭೀಕ್ಷೆಯಾಗಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಬೇರೆಯದೇ ಸ್ಥಿತಿ ಇದೆ. ಇಲ್ಲಿಯ ರೈತರನ್ನು ಕಾಂಗ್ರೆಸ್ ಪಕ್ಷ ಹೇಗೆ ಯಾಮಾರಿಸಿತು. ರೈತ ಪರಿಸ್ಥಿತಿ ಏನಾಗಿದೆ ಇವೆಲ್ಲಗಳ ಕುರಿತಂತೆ ತೆಲಂಗಾಣದ ರೈತರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುವುದು. ಅಷ್ಟೇ ಅಲ್ಲದೆ ಈ ಕುರಿತಂತೆ ಒಂದು ಯಾದಿ ಮಾಡಿದ್ದು, ಸಮಾವೇಶದಲ್ಲಿ ಅದನ್ನು ಮಂಡಿಸಲಾಗುವುದು'' ಎಂದು ರೈತರು ತಿಳಿಸಿದ್ದಾರೆ.