ರಾಣೆಬೆನ್ನೂರು: ಶಾಲೆಗೆ ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಮೃತಪಟ್ಟ ಶಿಕ್ಷಕಿಯ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ.
ಬೈಕ್ ಮೇಲಿಂದ ಬಿದ್ದು ಮೃತಪಟ್ಟ ಶಿಕ್ಷಕಿ: ಮೃತದೇಹದ ಮೆರವಣಿಗೆ ನಡೆಸಿ ಗ್ರಾಮಸ್ಥರಿಂದ ಅಂತಿಮ ನಮನ
ಶಾಲೆಗೆ ತೆರಳುತ್ತಿದ್ದ ವೇಳೆ ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಮೃತಪಟ್ಟ ಶಿಕ್ಷಕಿಯ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ರಾಣೆಬೆನ್ನೂರು ನಗರದಿಂದ ಮೆಡ್ಲೇರಿ ಗ್ರಾಮದಲ್ಲಿರೋ ಶಾಲೆಗೆ ಪತಿ ಜೊತೆ ಬೈಕ್‌ನಲ್ಲಿ ಬರ್ತಿದ್ದ ವೇಳೆ ಶಿಕ್ಷಕಿ ಲೀಲಾವತಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಗ್ರಾಮದ ಬೀರೇಶ್ವರ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ವಿಷಯ ಬೋಧನೆ ಮಾಡ್ತಿದ್ದ ಶಿಕ್ಷಕಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಶಿಕ್ಷಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪಾರ್ಥಿವ ಶರೀರವನ್ನು ಮೆಡ್ಲೇರಿ ಗ್ರಾಮಕ್ಕೆ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ನಂತರ ಶಿಕ್ಷಕಿಯ ಸ್ವಗ್ರಾಮ ರಾಣೆಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲಾಗಿದೆ.