ಹಾವೇರಿ:ಮಕ್ಕಳಿಂದ ಅನ್ಯಾಯಕ್ಕೊಳಗಾದ 85 ವರ್ಷದ ವೃದ್ಧೆ ಯಲ್ಲಮ್ಮ ಎಂಬುವರಿಗೆ ನ್ಯಾಯ ಕೊಡಿಸುವಲ್ಲಿ 'ಧ್ವನಿ ಸ್ವಧಾರ ಗೃಹ' ಯಶಸ್ವಿಯಾಗಿದೆ.
ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದ 85 ವರ್ಷದ ವೃದ್ಧೆ ಯಲ್ಲಮ್ಮನಿಗೆ ಪತಿ ಧರ್ಮಗೌಡನಿಂದ 6 ಎಕರೆ 23 ಗುಂಟೆ ಜಮೀನು ಬಂದಿತ್ತು. ಆದ್ರೆ ನಾಲ್ಕು ಮಕ್ಕಳ ತಾಯಿಯಾಗಿದ್ದ ಈ ವೃದ್ಧೆಗೆ ತನ್ನ ಇಬ್ಬರು ಗಂಡು ಮಕ್ಕಳು ಶತ್ರುವಾಗಿದ್ದಾರೆ. ಇಬ್ಬರು ಗಂಡು ಮಕ್ಕಳು ಜಮೀನನ್ನು ತಮ್ಮ ಸ್ವಂತಕ್ಕೆ ಬರೆಸಿಕೊಂಡು ತಾಯಿಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ಬೇಸತ್ತ ತಾಯಿ ಹಾವೇರಿಯ 'ಧ್ವನಿ ಸ್ವಧಾರ ಗೃಹ'ದ ಮೊರೆಹೋಗಿದ್ದರು.
ವೃದ್ಧೆಗೆ ನ್ಯಾಯ ದೊರಕಿಸಿಕೊಡುವಲ್ಲಿ ಸ್ವಧಾರ ಗೃಹ ಯಶಸ್ವಿ ಈ ವೃದ್ಧೆಯನ್ನು ಎರಡು ವರ್ಷದಿಂದ ಸಾಕಿ ಸಲುಹಿದ ಸ್ವಧಾರ ಗೃಹವು ಎಸಿ ನ್ಯಾಯಾಲಯದ ಕದ ತಟ್ಟಿದ್ದು, ಆ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಟ್ಟಿದೆ. ಎಸಿ ನ್ಯಾಯಾಲಯ ವೃದ್ಧೆಗೆ ತನ್ನ ಮಕ್ಕಳಿಂದ ಆಸ್ತಿಯನ್ನು ಮರಳಿಸಿಕೊಟ್ಟಿದೆ. ಎಸಿ ನ್ಯಾಯಾಲಯವು ವೃದ್ಧೆಯ ಮಕ್ಕಳಿಗೆ ಛೀಮಾರಿ ಹಾಕಿ ಆಸ್ತಿ ವಾಪಸ್ ಕೊಡಿಸಿದ್ದು, ಇಳಿ ವಯಸ್ಸಿನಲ್ಲಿರುವ ಯಲ್ಲಮ್ಮಳಿಗೆ ಸಂತಸ ತಂದಿದೆ.
ಮಕ್ಕಳಿಂದ ಅನ್ಯಾಯಕ್ಕೆ ಒಳಗಾದ ತಾಯಿ(ವೃದ್ಧೆ) ಯಲ್ಲಮ್ಮ 2 ವರ್ಷಗಳ ಹಿಂದೆ ಮಕ್ಕಳಿಂದ ಅನ್ಯಾಯವಾಗಿದೆ ಅಂತಾ ಸ್ವಧಾರ ಗೃಹಕ್ಕೆ ಬಂದಿದ್ದರು. ಇಳಿ ವಯಸ್ಸಿನಲ್ಲಿರುವ ಈ ಸಂತ್ರಸ್ತೆಯನ್ನು ಸೇರಿಸಿಕೊಂಡ ಸಂಸ್ಥೆ ಅಂದೇ ಎಸಿ ನ್ಯಾಯಾಲಯದ ಮೊರೆ ಹೋಗಿತ್ತು. ಅಂದು ತಾಯಿಯ ಅಳಲನ್ನು ಕೇಳಿದ ನ್ಯಾಯಾಲಯವು ಮಕ್ಕಳು ಯಲ್ಲಮ್ಮಳಿಗೆ ತಿಂಗಳಿಗೆ 10 ಸಾವಿರ ರೂಪಾಯಿ ನೀಡುವಂತೆ ತಾಕೀತು ಮಾಡಿತ್ತು. ಆದರೆ ಕಳೆದ ಆರು ತಿಂಗಳಿಂದ ತಾಯಿಗೆ ಮಕ್ಕಳು ಹಣ ಸಹ ನೀಡಿಲ್ಲ. ಇದರಿಂದ ಮತ್ತೆ ಎಸಿ ನ್ಯಾಯಾಲಯದ ಕದ ತಟ್ಟಿದ ಸಂಸ್ಥೆ ತಾಯಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದೆ. ನ್ಯಾಯಾಲಯದ ಈ ಆದೇಶ ವೃದ್ಧ ತಂದೆ-ತಾಯಿಯರನ್ನು ಶೋಷಣೆ ಮಾಡುವ ಮಕ್ಕಳಿಗೆ ಪಾಠವಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥೆ ಪರಿಮಳ ಜೈನ್.