ಕರ್ನಾಟಕ

karnataka

ETV Bharat / state

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ವದಂತಿ : ಆಹಾರ ಇಲಾಖೆಗಳ ಅಧಿಕಾರಿಗಳಿಂದ ಸ್ಪಷ್ಟನೆ

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ವದಂತಿ- ಗ್ರಾಮಸ್ಥರ ಆತಂಕ- ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳಿಂದ ಸ್ಪಷ್ಟನೆ

By

Published : Jul 4, 2022, 8:07 PM IST

supply-of-artificial-nutritional-rice-by-govt
ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ವದಂತಿ : ಆಹಾರ ಇಲಾಖೆಗಳ ಅಧಿಕಾರಿಗಳಿಂದ ಸ್ಪಷ್ಟನೆ

ಹಾವೇರಿ : ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರಬರಾಜು ಮಾಡುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿ ಪೂರೈಕೆಯಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಈ ರೀತಿಯ ಪಡಿತರ ಅಕ್ಕಿ ಪೂರೈಕೆಯಾಗುತ್ತಿದೆ ಎಂದು ಜನರು ಹೇಳಿದ್ದಾರೆ. ಪಡಿತರ ಅಕ್ಕಿಯಲ್ಲಿ ಈ ಅಕ್ಕಿಗಳು ಪೂರೈಕೆಯಾಗುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ಆರೋಪಿಸಿದ್ದಾರೆ.

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ವದಂತಿ : ಆಹಾರ ಇಲಾಖೆಗಳ ಅಧಿಕಾರಿಗಳಿಂದ ಸ್ಪಷ್ಟನೆ

ಪೂರೈಕೆಯಾಗಿರುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿಯನ್ನು ಜನರು ತಾವೇ ಬೇರ್ಪಡಿಸಿ ಪರೀಕ್ಷೆ ನಡೆಸಿ ಪ್ಲಾಸ್ಟಿಕ್ ಅಕ್ಕಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅನ್ನ ಸೇವನೆಯಿಂದ ಗ್ಯಾಸ್ ಟ್ರಬಲ್ ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತವೆ ಎಂಬ ವದಂತಿಗಳು ಹರಡಿವೆ. ಇನ್ನೂ ಕೆಲವರು ಪಡಿತರ ಅಕ್ಕಿಯನ್ನು ಬಳಸದೇ ಹಾಗೇ ಇಟ್ಟಿದ್ದಾರಂತೆ.

ಆದರೆ ಈ ರೀತಿ ಪಡಿತರ ಅಕ್ಕಿಯಲ್ಲಿ ಮಿಶ್ರಣವಾಗಿರುವ ಅಕ್ಕಿ ಪ್ಲಾಸ್ಟಿಕ್ ಅಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಬಂದಿತ್ತು. ಅಲ್ಲದೆ ಸಾರ್ವಜನಿಕರಿಗೆ ಪೌಷ್ಟಿಕಾಂಶದ ಕೊರತೆ ಇರುವ ಕಾರಣ ಇಲಾಖೆ ಈ ರೀತಿಯ ಅಕ್ಕಿಯನ್ನು ಪೂರೈಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ್ ಹೆಗ್ಗಳಿಗಿ ಸ್ಪಷ್ಟಪಡಿಸಿದ್ದಾರೆ.

ಪ್ಲಾಸ್ಟಿಕ್ ಅಕ್ಕಿ ಅಲ್ಲ, ಪೌಷ್ಟಿಕಾಂಶದ ಅಕ್ಕಿ :ಇದು ನೈಸರ್ಗಿಕವಾಗಿ ಬೆಳೆದ ಅಕ್ಕಿಯಲ್ಲ. ಬದಲಿಗೆ ಇಲಾಖೆ ಯಂತ್ರಗಳಿಂದ ತಯಾರಿಸಿದ ಅಕ್ಕಿ. ಪ್ರತಿ ಕ್ವಿಂಟಾಲ್ ಅಕ್ಕಿಗೆ ಒಂದು ಕೆಜಿಯಂತೆ ಈ ಅಕ್ಕಿಯನ್ನು ಸೇರಿಸಲಾಗುಗುತ್ತಿದೆ. ಇದರಲ್ಲಿ ಕಬ್ಬಿಣಾಂಶ, ಫೋಲಿಕ್ ಆಮ್ಲ, ವಿಟಾಮಿನ್ ಎ, ವಿಟಾಮಿನ್ ಬಿ12, ಜಿಂಕ್ ಸೇರಿದಂತೆ ವಿವಿಧ ಪೌಷ್ಟಿಕಾಂಶಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಸಾಮಾನ್ಯ ಅಕ್ಕಿಯಲ್ಲಿ ಈ ತರಹದ ಅಕ್ಕಿ ಮಿಶ್ರಣ ಮಾಡಿ ಪೂರೈಕೆ ಮಾಡುತ್ತಿದೆ. ಈ ರೀತಿಯ ಅಕ್ಕಿ ಪೂರೈಕೆಯನ್ನು ರಾಜ್ಯದ 14 ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯೂ ಸೇರಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೂ ಈ ಯೋಜನೆ ಜಾರಿಯಾಗಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಆದರೆ ಈ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸದ ಕಾರಣ ಈ ರೀತಿ ತಪ್ಪುಕಲ್ಪನೆಗೆ ದಾರಿಯಾಗಿದೆ. ಈ ಕುರಿತಂತೆ ಸರ್ಕಾರ ಪ್ರತಿ ಆಹಾರ ವಿತರಣಾ ಕೇಂದ್ರದಲ್ಲಿ ಗೋಡೆಬರಹ ಅಥವಾ ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ :ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ : ಪ್ರತಿಭಟನೆ ವಾಪಸ್​

ABOUT THE AUTHOR

...view details