ಕರ್ನಾಟಕ

karnataka

ETV Bharat / state

ಮಳೆಗೆ ನಲುಗಿದ ಅಲೆಮಾರಿ ಜನಾಂಗ... ಸುಡುಗಾಡು ಸಿದ್ದರ ಗೋಳು ಕೇಳೋರು ಯಾರು?

ಉತ್ತರಕರ್ನಾಟಕದ ಅಲೆಮಾರಿ ಜನಾಂಗಗಳಲ್ಲಿ ಸುಡುಗಾಡು ಸಿದ್ದರ ಜನಾಂಗ ಕೂಡ ಒಂದು. ಈ ಜನಾಂಗದ 26 ಕ್ಕೂ ಅಧಿಕ ಕುಟುಂಬಗಳು ಹಾವೇರಿ ನಗರದಲ್ಲಿ ವಾಸಿಸುತ್ತಿವೆ. ಇವರು ವಾಸಿಸುವ ಪ್ರದೇಶಕ್ಕೆ ಸರಿಯಾದ ರಸ್ತೆಯಿಲ್ಲ, ವಿದ್ಯುತ್, ನೀರು ಇಲ್ಲ. ಹಲವು ಇಲ್ಲಗಳ ನಡುವೆ ಸುಡುಗಾಡು ಸಿದ್ದರ ಕುಟುಂಬಗಳು ಜೀವಿಸುತ್ತಿವೆ.

sudugadu sidda tribal people problems
ಸುಡುಗಾಡು ಸಿದ್ದರು

By

Published : Aug 19, 2020, 12:25 AM IST

ಹಾವೇರಿ: ಮಳೆಗಾಲ ಬಂದರೆ ಸಾಕು ಹಾವೇರಿ ಹೊರವಲಯದ ಸುಡುಗಾಡು ಸಿದ್ದರ ಕುಟುಂಬಗಳಿಗೆ ಆತಂಕ ಮನೆ ಮಾಡುತ್ತೆ. ಕಳೆದ ವರ್ಷ ಸುರಿದ ಭಾರಿ ಮಳೆ ಇವರ ಗುಡಿಸಲು ಕಿತ್ತುಗೊಂಡಿತ್ತು. ಜಿಲ್ಲಾಡಳಿತ ಗಂಜಿಕೇಂದ್ರ ತೆರೆದು ನಂತರ ತಾತ್ಕಾಲಿಕ ತಗಡಿನ ಶೆಡ್ ಹಾಕಿಕೊಟ್ಟಿತ್ತು. ಅಲ್ಲದೆ ಇವರಿಗೆ ವರ್ಷದಲ್ಲಿ ಮನೆ ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಜಿಲ್ಲಾಡಳಿತ ಭರವಸೆ ನೀಡಿ ವರ್ಷವಾದ್ರೂ ಇವರಿಗೆ ಶಾಶ್ವತ ಸೂರು ಸಿಕ್ಕಿಲ್ಲ. ಸರಿಯಾದ ರಸ್ತೆಯಿಲ್ಲ, ವಿದ್ಯುತ್ ನೀರು ಇಲ್ಲ. ಹಲವು ಇಲ್ಲಗಳ ನಡುವೆ ಸುಡುಗಾಡು ಸಿದ್ದರ ಕುಟುಂಬಗಳು ಜೀವಿಸುತ್ತಿವೆ.

ಸುಡುಗಾಡು ಸಿದ್ದರು
ಉತ್ತರ ಕರ್ನಾಟಕದ ಅಲೆಮಾರಿ ಜನಾಂಗಗಳಲ್ಲಿ ಒಂದು ಸುಡುಗಾಡು ಸಿದ್ದರ ಜನಾಂಗ. ಈ ಜನಾಂಗದ 26 ಕ್ಕೂ ಅಧಿಕ ಕುಟುಂಬಗಳು ಹಾವೇರಿ ನಗರದಲ್ಲಿ ವಾಸಿಸುತ್ತಿವೆ. ಆದರೆ ಕಳೆದ ವರ್ಷ ಸುರಿದ ಮಳೆ ಇವರ ಬದುಕನ್ನ ಕಸಿದುಕೊಂಡಿದೆ. ಅಂದು ಸುರಿದ ಮಳೆಗ ಅಕ್ಷರಶಃ ಬೀದಿಗೆ ಬಂದಿದ್ದ ಕುಟುಂಬಗಳಿಗೆ ಜಿಲ್ಲಾಡಳಿತ ಇನ್ನೂ ಮನೆ ನಿರ್ಮಿಸಿ ಕೊಟ್ಟಿಲ್ಲ . ಈಗ ಪುನಃ ಮಳೆಗಾಲ ಆರಂಭವಾದ್ರೂ ಜಿಲ್ಲಾಡಳಿತ ಈ ಕಡೆ ಮುಖಮಾಡಿಲ್ಲ.

ಹಾವೇರಿ ಹೊರವಲಯದ ಗಣಜೂರು ರಸ್ತೆಯ ಜಮೀನುಗಳ ನಡುವೆ ಇವರ ಕುಟುಂಬಗಳಿಗೆ ತಗಡಿನ ಶೆಡ್ ಹಾಕಲಾಗಿದೆ. ಈ ಶೆಡ್‌ಗಳಲ್ಲಿ ಹಾಕಿದ ಸೌರವಿದ್ಯುತ್ ಬಲ್ಬ್​ಗಳು ಕಾರ್ಯನಿರ್ವಹಿಸುವುದು ಬಿಟ್ಟು ತಿಂಗಳುಗಳೆ ಗತಿಸಿವೆ. ಇಲ್ಲಿಯ ಜನರಿಗೆ ನೀರು ಪೂರೈಸುವ ಏಕೈಕ ನಲ್ಲಿ ತಿಂಗಳಿಗೆ ಎರಡು ಬಾರಿ ದುರಸ್ತಿಗೆ ಬರುತ್ತೆ. ಇವರು ಓಡಾಡುವ ರಸ್ತೆ ಕೆಸರು ಗದ್ದೆಯಾಗಿದೆ. ಇಂತಹದರಲ್ಲಿ ಜೀವನ ಹೇಗೆ ಸಾಗಿಸಬೇಕು ಎನ್ನುತ್ತಿವೆ ಈ ಕುಟುಂಬಗಳು.


2019ರ ನೆರೆ ಹಾವಳಿಯಲ್ಲಿ ಸರ್ಕಾರ ತಗಡಿನೆ ಶೆಡ್ ಸಹ ನಿರ್ಮಿಸಿ ನಮ್ಮನ್ನ ಕಾಪಾಡಿತು. ಆದರೆ ಅಂದು ಸರ್ಕಾರ ನೀಡಿದ್ದ ಶಾಶ್ವತ ಸೂರು ಕನಸಾಗಿಯೇ ಉಳಿದಿದೆ. ಸರ್ಕಾರ ನಿರ್ಮಿಸಿದ ತಗಡಿನ ಶೆಡ್‌ಗಳು ಸೋರುತ್ತಿವೆ. 26 ಕುಟುಂಬಗಳ 125 ಕ್ಕೂ ಅಧಿಕ ಜನರು ವಾಸಿಸುವ ಪ್ರದೇಶ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಶಾಶ್ವತ ಸೂರು ಕಲ್ಪಿಸುವುದಿರಲಿ ಮೊದಲು ಈಗ ಇರುವ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲಿ ಎನ್ನುತ್ತಿವೆ ಈ ಸುಡುಗಾಡು ಸಿದ್ದರ ಕುಟುಂಬಗಳು.

ABOUT THE AUTHOR

...view details