ಕರ್ನಾಟಕ

karnataka

ETV Bharat / state

ಸರ್ಕಾರಿ ಬಸ್‌ಗಳಲ್ಲಿ 'ಶಕ್ತಿ' ಪ್ರದರ್ಶನ: ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಹರಸಾಹಸ - ಶಕ್ತಿ ಯೋಜನೆ

ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ಜಾಗ ಸಿಗದ ಕಾರಣಕ್ಕೆ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಗೈರು ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Guarantee Scheme
ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಲು ಜಾಗ ಸಿಗದ ಕಾರಣಕ್ಕೆ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಗೈರು..

By

Published : Jun 20, 2023, 9:58 PM IST

ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ವಿದ್ಯಾರ್ಥಿನಿ ಹಾಗೂ ಪೋಷಕರ ಪ್ರತಿಕ್ರಿಯೆ

ಹಾವೇರಿ:ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಲಭಿಸಿದೆ. ದಿನ ದಿನಕ್ಕೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಹುತೇಕ ಬಸ್‌ಗಳು ಭರ್ತಿಯಾಗಿ ಸಂಚಾರ ಮಾಡುತ್ತಿವೆ. ಜನರು ಬಸ್​ಗಳಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದಾರೆ. ಸರ್ಕಾರಿ ಬಸ್​ಗಳಲ್ಲಿ ಆಸನಕ್ಕಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಬಸ್‌ ಸಂಪೂರ್ಣ ಭರ್ತಿಯಾಗಿ ಮಕ್ಕಳು, ವೃದ್ಧರು ಬಸ್ ಬಾಗಿಲುಗಳಲ್ಲೇ ನಿಂತು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿದೆ.

ಈ ಮಧ್ಯೆ ಹಾವೇರಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ದೊಡ್ಡ ಕಿರಿ ಕಿರಿಯಾಗಿ ಪರಿಣಮಿಸಿದೆ. ಜಿಲ್ಲಾ ಕೇಂದ್ರ ಹಾವೇರಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ಆದರೆ, ಶಕ್ತಿ ಯೋಜನೆ ಆರಂಭವಾದಾಗಿನಿಂದ ಬಸ್​ಗಳು ಭರ್ತಿಯಾಗಿ ಓಡಾಡುತ್ತಿವೆ. ಇದರಿಂದ ಶಾಲಾ, ಕಾಲೇಜುಗಳಿಗೆ ಸರಿಯಾದ ವೇಳೆಗೆ ಹೋಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಸ್‌ಗಳಲ್ಲಿ ಉಸಿರಾಡುವುದೂ ಕಷ್ಟ:ಕೆಎಸ್​ಆರ್​ಟಿಸಿ ಬಸ್‌ಗಳು ಫುಲ್​ ರಶ್​ ಆಗಿ ಬರುತ್ತಿವೆ. ಅದರಲ್ಲಿ ಹತ್ತಲು ಜಾಗವೇ ಇಲ್ಲದ ಪರಿಸ್ಥಿತಿ ಇದೆ. ಈ ಬಸ್​ಗಳ ಮೂಲಕ ಗ್ರಾಮಗಳಿಂದ ಹಾವೇರಿಗೆ ಆಗಮಿಸಿ, ಕಾಲೇಜಿಗೆ ಹೋಗುವಷ್ಟರಲ್ಲಿಯೇ ತರಗತಿಗಳು ಆರಂಭವಾಗಿರುತ್ತವೆ. ಇದರಿಂದ ಶಿಕ್ಷಕರು ಮತ್ತು ಉಪನ್ಯಾಸಕರಿಂದ ದಿನನಿತ್ಯ ಬೈಯಿಸಿಕೊಳ್ಳುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಬಸ್‌ಗಳಲ್ಲಿ ಉಸಿರಾಡಲು ಸಹ ಕಷ್ಟವಾಗುವಂತಹ ಪರಿಸ್ಥಿತಿ ಇರುತ್ತೆ. ಗ್ರಾಮಕ್ಕೆ ಮರಳಲು ಬಸ್ ನಿಲ್ದಾಣಕ್ಕೆ ಬಂದರೆ, ಬಸ್‌ಗಳಲ್ಲಿ ಹತ್ತಲು ಕೂಡ ನಿತ್ಯ ಸರ್ಕಸ್ ಮಾಡುವ ಪರಿಸ್ಥಿತಿ. ಪುರುಷರ ಜೊತೆಗೆ ಓಡೋಡಿ ಹೋಗಿ ಬಸ್ ಹತ್ತಿ ಸೀಟ್ ಹಿಡಿಯುವುದರಲ್ಲಿಯೇ ಸಾಕು ಸಾಕಾಗಿ ಹೋಗುತ್ತೆ ಎಂದು ಹೇಳುತ್ತಾರೆ ವಿದ್ಯಾರ್ಥಿನಿಯರು.

ಕಂಡಕ್ಟರ್​, ನಿರ್ವಾಹಕರಿಗೆ ಒತ್ತಡ:ಸರ್ಕಾರದ ಈ ಯೋಜನೆ ಒಳ್ಳೆಯದೇ ಆಗಿದೆ. ಆದರೆ, ಇದಕ್ಕೆ ಸರಿಯಾದ ಪೂರ್ವ ತಯಾರಿಯಿಲ್ಲ. ಅಧಿಕ ಬಸ್‌ಗಳನ್ನು ಓಡಿಸುವ ಮೂಲಕ ಈ ನೂಕುನುಗ್ಗಲು ತಪ್ಪಿಸಬೇಕು. ಗ್ರಾಮಗಳಿಗೆ ಇರುವ ಬಸ್‌ಗಳೇ ಬೆರಳೆಣಿಕೆಯಷ್ಟು. ಇಂಥದ್ರಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಸಂಚರಿಸಬೇಕು. ಬಸ್‌ ಸಂಚಾರದ ಜಂಜಡದಿಂದ ಕೆಲವು ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಹೋಗದೇ ಮನೆಯಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಇದೆ. ಬಸ್‌ನ ಚಾಲಕರು ಮತ್ತು ನಿರ್ವಾಹಕರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹೋಗಿದೆ ಎನ್ನುತ್ತಾರೆ ಸಾರಿಗೆ ಸಿಬ್ಬಂದಿ.

ಹೆಚ್ಚುವರಿ ಬಸ್‌ಗೆ ವಿದ್ಯಾರ್ಥಿಗಳ ಆಗ್ರಹ:ಕೆಲವು ಪ್ರಯಣಿಕರಂತೂ ನಿರ್ವಾಹಕರ ಆಸನದಲ್ಲೇ ಕುಳಿತುಕೊಂಡು ಪ್ರಯಾಣಿಸುತ್ತಿದ್ದಾರೆ. ಬಸ್​ನಲ್ಲಿ ಒಂದು ಹೆಜ್ಜೆ ಇಡಲು ಕೂಡ ಪ್ರಯಾಸ ಪಡಬೇಕಾಗಿದೆ. ಈ ಯೋಜನೆ ಆರಂಭವಾದಾಗಿನಿಂದ ಪ್ರಯಣಿಕರ ಜೊತೆ ಒಂದಿಲ್ಲೊಂದು ಕಾರಣಕ್ಕೆ ಜಗಳವಾಡುವಂತಾಗಿದೆ ಎನ್ನುತ್ತಾರೆ ನಿರ್ವಾಹಕರು. ಸರ್ಕಾರ ಆದಷ್ಟು ಬೇಗ ಹೆಚ್ಚುವರಿ ಬಸ್‌ಗಳನ್ನು ಸೇವೆಗೆ ಒದಗಿಸುವ ಮೂಲಕ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ:Guarantee scheme: ಗೃಹಜ್ಯೋತಿಗೆ ಸರ್ವರ್ ಕಂಟಕ.. ಸೇವಾಸಿಂಧು ಪೋರ್ಟಲ್ ವಿರುದ್ಧ ಜನ ಗರಂ

ABOUT THE AUTHOR

...view details