ಹಾವೇರಿ :ಮಕ್ಕಳ ಕಳ್ಳತನ ವದಂತಿ ಪ್ರಕರಣ ಹಾವೇರಿಯಲ್ಲಿ ಸಹ ಕಾಣಿಸಿಕೊಂಡಿವೆ. ಮಕ್ಕಳ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಅಮಾಯಕ, ಅಸಹಾಯಕ ಮತ್ತು ಮಾನಸಿಕ ಅಸ್ವಸ್ಥ ಭಿಕ್ಷುಕರನ್ನು ಸ್ಥಳೀಯರು ಥಳಿಸಿದ ಘಟನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಐದು ಹಲ್ಲೆ ಪ್ರಕರಣಗಳು ವರದಿಯಾಗಿವೆ.
12 ರಂದು ಹಾವೇರಿ ತಾಲೂಕು ದೇವಗಿರಿಯಲ್ಲಿ ಬಾಂಬೆ ಮಿಠಾಯಿ ಮಾರುತ್ತಿದ್ದ ಬಾಲಕನ ಹಿಡಿದು ಥಳಿಸಿದ್ದ ಜನ ನಂತರ ಪೊಲೀಸರಿಗೆ ಒಪ್ಪಿಸಿದ್ದರು. 15 ರಂದು ಬಂಕಾಪುರದಲ್ಲಿ ಮಾತು ಬಾರದ ಭಿಕ್ಷುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದರು. ಅದೇ ಭಿಕ್ಷುಕ ಶಿಗ್ಗಾಂವಿಗೆ 16 ರಂದು ತೆರಳಿದಾಗ ಅಲ್ಲಿ ಸಹ ಥಳಿಸಿದ್ದರು. 15 ರಂದು ಶಿಗ್ಗಾಂವಿ ತಾಲೂಕಿನ ತವರಮೆಳ್ಳಹಳ್ಳಿಯಲ್ಲಿ ಅಮಾಯಕ ಮಹಿಳೆಯನ್ನು ತಡೆದು ಕೂಡಿ ಹಾಕಿ ಸ್ಥಳೀಯರು ಹಲ್ಲೆ ಮಾಡಿದ್ದರು. 16 ರಂದು ರಾಣೆಬೆನ್ನೂರಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹರಡಿತ್ತು. ಈ ಎಲ್ಲ ಪ್ರಕರಣಗಳಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಈ ರೀತಿ ಕೈಗೆ ಕಾನೂನು ತೆಗೆದುಕೊಳ್ಳುವ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಎಸ್ಪಿ ಹನುಮಂತರಾಯ, ಯಾರೇ ಅಪರಿಚಿತರು ಅನುಮಾನಾಸ್ಪದವಾಗಿ ವರ್ತಿಸಿದರೇ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಕರೆ ಮಾಡಿ ತಿಳಿಸುವಂತೆ ಹೇಳಿದ್ದಾರೆ. ಅಲ್ಲದೆ ತುರ್ತು ಸೇವೆ 112 ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರ ಬದಲು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುವದಾಗಿ ತಿಳಿಸಿದ್ದಾರೆ.