ಹಾವೇರಿ: ಕರ್ನಾಟಕ ರಾಜ್ಯದ ಬಡವರು, ದಲಿತರು ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್ ಬೆಲೆ ₹11ಒ ರುಪಾಯಿಗೂ ಅಧಿಕ ಆಗಿದೆ. ಡಿಸೇಲ್ ಬೆಲೆಯೂ ನೂರರ ಗಡಿ ದಾಟಿದೆ. ಸಿಮೆಂಟ್ ಬೆಲೆ ಏರಿಕೆ ಆಗಿದೆ. ನದಿಯಲ್ಲಿನ ಮರಳು ಕೂಡ ಒಂದು ಲಾರಿಗೆ ₹1 ಲಕ್ಷ ಆಗಿದೆ.
ಎಂ.ಸ್ಯಾಂಡ್ ಬೆಲೆ ಕೂಡ ಗಗನಕ್ಕೇರಿದೆ. ಅಡುಗೆ ಎಣ್ಣೆ, ತೊಗರಿ ಬೇಳೆ ಬೆಲೆ ಕೂಡ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಗೆ ಯಾಕೆ ವೋಟು ಕೊಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಿವಾಸದ ಬಳಿ ಮಾಧ್ಯಮಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರು ರೇಷನ್ ಖರೀದಿಗೆ ಹೋಗಿದ್ದಾರಾ? ಮೋದಿ ಮತ್ತು ಬೊಮ್ಮಾಯಿ ದೇಶಕ್ಕೆ ಹಾನಿಕಾರಕ. ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದರು.
ಕೊರೊನಾ ಸಮಯದಲ್ಲಿ ಬಿಜೆಪಿ ನಾಯಕರು ಜನರ ಬಾಗಿಲಿಗೆ ಹೋಗಿದ್ದಾರಾ?
ಕೊರೊನಾ ಸಮಯದಲ್ಲಿ ಬಿಜೆಪಿ ಸರ್ಕಾರದ ಯಾವುದೇ ಜನಪ್ರತಿನಿಧಿಗಳು ಜನರ ಮನೆ ಬಾಗಿಲಿಗೆ ಹೋಗಲಿಲ್ಲ. ನಮ್ಮ ಅಭ್ಯರ್ಥಿ ಶ್ರೀನಿವಾಸ ಮಾನೆ ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ಮನೆ ಬಾಗಿಲಿಗೆ ಹೋದರು. ಆಕ್ಸಿಜನ್ ವ್ಯವಸ್ಥೆ, ಕಷ್ಟದಲ್ಲಿರುವ ವಿವಿಧ ವರ್ಗದ ಜನರಿಗೆ ಹಣಕಾಸಿನ ನೆರವು ನೀಡಿದ್ದರು. ಮಾನೆಗೆ ಜನರು ಆಪದ್ಭಾಂದವ ಎಂಬ ಹೆಸರು ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಆಗಿರುವ ಶಿವರಾಜ ಸಜ್ಜನರ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿ ಮಾಡಿದ್ದರು ಎಂದು ಆರೋಪಿಸಿದರು.