ಹಾವೇರಿ: ಮೊಬೈಲ್ ಹಾವಳಿಗೆ ಮರೆಮಾಚುತ್ತಿರುವ ಹವ್ಯಾಸಗಳಲ್ಲಿ ಓದುವ ಹವ್ಯಾಸ ಸಹ ಒಂದು. ಈ ಹಿಂದೆ ಪ್ರತಿ ಗ್ರಾಮಕ್ಕೆ ಒಂದು ಗ್ರಂಥಾಲಯಗಳಿದ್ದವು. ಗ್ರಾಮದ ಜನರು ದಿನಪತ್ರಿಕೆ ವಾರಪತ್ರಿಕೆ ಮಾಸಿಕ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆ ಓದಲು ಗ್ರಂಥಾಲಯಕ್ಕೆ ಬರುತ್ತಿದ್ದರು. ಅದರ ಜೊತೆಗೆ ಕನ್ನಡ ನುಡಿಯ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು.
ಕವನಸಂಕಲನ, ಕಾದಂಬರಿ, ಕಾವ್ಯ ಪ್ರಭಂದಗಳು ಕಾದಂಬರಿಗಳು ಕಥಾಸಂಕಲನ ಸೇರಿದಂತೆ ವಿವಿಧ ಪ್ರಕಾರದ ಗ್ರಂಥಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಅಷ್ಟೇ ಯಾಕೆ ಕನ್ನಡದ ಆದಿಕವಿಗಳಿಂದ ಹಿಡಿದು ಇತ್ತಿಚೀನ ಲೇಖಕರ ಗ್ರಂಥಗಳು ಸಹ ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಜನ ಇವುಗಳನ್ನು ಓದಲು ಗ್ರಂಥಾಲಯದ ಮೆಂಬರಶಿಪ್ ಪಡೆದು ಪುಸ್ತಕ ಎರವಲು ಪಡೆದು ಮನೆಗೆ ತಂದು ಓದುವ ಹವ್ಯಾಸ ಇಟ್ಟುಕೊಂಡಿದ್ದರು.
10 ಲಕ್ಷ ರೂಪಾಯಿ ವೆಚ್ಚದ ಗ್ರಂಥಾಲಯ: ಆದರೆ, ಈಗ ಪುಸ್ತಕಗಳಿಗೆ ಗ್ರಂಥಾಲಯವನ್ನು ಅವಲಂಬಿಸುವ ಕಾಲ ಬದಲಾಗಿದೆ. ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲೇ ಎಲ್ಲ ದೊರಕುವಂತಾಗಿದೆ. ವಿಪರ್ಯಾಸವೆಂದರೆ ಇದರಲ್ಲಿಯೂ ಮೊಬೈಲ್ ಗೇಮ್ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಲ್ಲಿ ನಿರತರಾಗಿರುವ ಯುವ ಸಮೂಹ ಕ್ರಮೇಣವಾಗಿ ಓದುವ ಹವ್ಯಾಸಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಗ್ರಂಥಾಲಯವೊಂದು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿದೆ. ಹೌದು ಈ ಗ್ರಾಮದಲ್ಲಿ ಗ್ರಾಮಪಂಚಾಯತ್ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿದೆ. ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ.
ಇಲ್ಲಿವೆ 5 ಸಾವಿರಕ್ಕೂ ಅಧಿಕ ಪುಸ್ತಕಗಳು: ಮಕ್ಕಳಿಗಾಗಿ ವಿಶೇಷ ವಿಭಾಗ ತೆರೆಯಲಾಗಿದ್ದು ಇಲ್ಲಿ ಮಕ್ಕಳು ಕೇರಂ, ಚೆಸ್ ಸೇರಿದಂತೆ ವಿವಿಧ ಆಟಗಳನ್ನು ಕಲಿಯಲು ಓದಲು ಅವಕಾಶ ಕಲ್ಪಿಸಲಾಗಿದೆ. ಗ್ರಂಥಾಲಯದಲ್ಲಿ 5 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಇಲ್ಲಿಯ ಕನ್ನಡ ಪುಸ್ತಕಗಳು ಗ್ರಾಮದ ಜನರ ವಿದ್ಯಾರ್ಥಿಗಳ ಜ್ಞಾನದ ಹಸಿವು ನೀಗಿಸುತ್ತಿವೆ. ಈ ಗ್ರಂಥಾಲಯದ ವಿಶೇಷ ಎಂದರೆ ಗ್ರಾಮದ ಹೊರವಲಯದಲ್ಲಿರುವ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸಹ ಇಲ್ಲಿಗೆ ವ್ಯಾಸಂಗ ಮಾಡಲು ಆಗಮಿಸುತ್ತಾರೆ.