ಹಾವೇರಿ:ಉಕ್ರೇನ್ನಲ್ಲಿ ಬಾಂಬ್ ದಾಳಿಗೆ ಬಲಿಯಾದ ಜಿಲ್ಲೆಯ ನವೀನ್ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಅಲ್ಲದೇ, ನವೀನ್ ಅವರ ಹಿರಿಯ ಸಹೋದರನಿಗೆ ಉದ್ಯೋಗ ನೀಡುವ ಭರವಸೆಯನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ.
ಇಂದು ನವೀನ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ದಾಳಿಗೆ ಉಕ್ರೇನ್ನಲ್ಲಿ ಮೃತಪಟ್ಟ ರಾಜ್ಯದ ಯುವಕ ನವೀನ್ ಪಾರ್ಥಿವ ಶರೀರವನ್ನು ತರಲು ಸರ್ವಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಸುತ್ತಲೂ ಬಾಂಬಿಂಗ್ ಹೆಚ್ಚಾಗಿದೆ. ಹೀಗಾಗಿ ನವೀನ್ ಮೃತದೇಹ ತರಲು ಆಗುತ್ತಿಲ್ಲ. ಇಂದು ಯುದ್ಧ ವಿರಾಮ ನೀಡಲಾಗಿದೆ. ಆದಷ್ಟು ಬೇಗ ಪಾರ್ಥಿವ ಶರೀರವನ್ನ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಉಕ್ರೇನ್ನಲ್ಲಿ ಯುದ್ಧ ನಿಲ್ಲಲಿ ಎಂದು ಪ್ರಾರ್ಥಿಸಲಾಗುವುದು. ಅಲ್ಲಿ ಸಿಲುಕಿರುವ ಕನ್ನಡಿಗರು ನಡೆದುಕೊಂಡು ಬೇರೆ ದೇಶದ ಗಡಿಗಳಿಗೆ ಬಂದಿದ್ದಾರೆ. ಕೆಲವರು ಬಂಕರ್ಗಳಲ್ಲಿದ್ದಾರೆ. ನಮ್ಮ ಜಿಲ್ಲೆಯಿಂದ 10 ಜನರು ಹೋಗಿದ್ದರು. ಐವರು ಬಂದಿದ್ದಾರೆ, ಉಳಿದ ಐವರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದರು.