ಶಿವಾನಂದ ತಪೋಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಾವೇರಿ: ಈ ಹಿಂದೆ ಅಯೋಧ್ಯೆಯೊಳಗೆ ಹೋಗಬೇಕಾದರೆ ಪೊಲೀಸರು ಅಲ್ಲಿ ಹೋಗಬೇಡಿ, ಇಲ್ಲಿ ಹೋಗಬೇಡಿ ಎಂದು ತಡೆಯುತ್ತಿದ್ದರು. ಆದರೆ, ಈಗ ಅಲ್ಲಿಯೇ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರ್ಷ ವ್ಯಕ್ತಪಡಿಸಿದರು.
ಬುಧವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಶ್ರೀ ಶಿವಾನಂದ ತಪೋಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಜಗತ್ತಿನ ವಿವಿಧ ದೇಶಗಳಲ್ಲಿರುವ ಶ್ರೀರಾಮನ ಭಕ್ತರು ಅಯೋಧ್ಯೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಾಮಮಂದಿರ ನಿರ್ಮಿಸಿದ್ದಾರೆ. ಅಯೋಧ್ಯೆಯಲ್ಲಿ ವಿಶೇಷವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಮುಂದಿನ ಜನವರಿ 24ರಂದು ಉದ್ಘಾಟನೆಯಾಗಲಿದೆ. ಅಂದು ಅಲ್ಲಿಗೆ ವಿಶ್ವವೇ ಬಂದು ಸೇರಲಿದೆ" ಎಂದರು.
"ಚಾರ್‌ಧಾಮ್‌ನಲ್ಲಿ ಸುನಾಮಿ ಬಂದಾಗ ಅಕ್ಕಪಕ್ಕದ ಕಟ್ಟಡಗಳು ಕೊಚ್ಚಿಕೊಂಡು ಹೋಗುತ್ತವೆ. ಆದರೆ, ಕೇದಾರಲಿಂಗನ ಬಳಿ ಸುನಾಮಿ ಬಂದಾಗ ಭೀಮನ ಬಂಡೆ ಬಂದು ದೇವಸ್ಥಾನವನ್ನು ಕಾಪಾಡುತ್ತದೆ ಎಂದರೆ ಅದೊಂದು ಪವಾಡ. ತಮಿಳುನಾಡಿನ ತಿರುಚಂದೊರನಲ್ಲಿ ಸುನಾಮಿ ಬಂದಾಗ ಈಶ್ವರನ ಮಗ ಸುಬ್ರಹ್ಮಣ್ಯ ದೇವಸ್ಥಾನವನ್ನು ಮುಟ್ಟಲೂ ಸಹ ಸುನಾಮಿಗೆ ಸಾಧ್ಯವಾಗಲಿಲ್ಲ" ಎಂದು ಹೇಳಿದರು.
"ಒಂದು ಕಾಲದಲ್ಲಿ ಭಾರತವನ್ನು ಭಿಕ್ಷುಕರ ನಾಡು ಎಂದು ಕರೆಯುತ್ತಿದ್ದರು. ಆರೋಗ್ಯ, ಉದ್ಯೋಗ, ವಿದ್ಯಾವಂತರು ಇಲ್ಲವೆಂದು ಹೇಳುತ್ತಿದ್ದರು. ಆದರೆ ಭಾರತಕ್ಕೆ ಇಂದು ವಿಶ್ವನಾಯಕನಾಗುವ ಎಲ್ಲಾ ಅವಕಾಶ ಸಿಕ್ಕಿದೆ. ಇದಕ್ಕೆ ಇಲ್ಲಿಯ ಸಂತರೇ ಕಾರಣ. ಸಂತರು ತಮ್ಮ ಜೀವನದಲ್ಲಿ ಬ್ರಹ್ಮಚರ್ಯ ಪಾಲಿಸಿ, ತಪಸ್ಸು ಮಾಡಿ ಕೋಟಿ ಕೋಟಿ ಭಕ್ತರ ದೇಹದಲ್ಲಿನ ದುರ್ಗುಣಗಳನ್ನು ತೆಗೆದು ಈಶ್ವರ ದೇವರ ಸ್ಥಾಪನೆ ಮಾಡಿದ್ರಲ್ಲಾ ಅದು ಈ ದೇಶದ ಪರಂಪರೆ" ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಸಗಣಿಯಲ್ಲಿ ಹೊಡೆದಾಡಿಕೊಂಡ ಜನರು.. ಇದು ಗಡಿನಾಡ ಕನ್ನಡಿಗರ ವಿಶೇಷ 'ಗೊರೆ ಹಬ್ಬ'
"ಕಾಶಿ ವಿಶ್ವನಾಥನ ದೇವಸ್ಥಾನದಲ್ಲಿ ಕಾಲಿಡಲು ಆಗುತ್ತಿರಲಿಲ್ಲ. ಆದರೆ, ಇಂದು ನ್ಯಾಯಾಲಯ ಸರ್ವೇ ಮಾಡುವಂತೆ ಆದೇಶಿಸಿದೆ. ಅಲ್ಲಿನ ಮಸೀದಿಯೊಳಗೆ ಈಶ್ವರ ಇದ್ದರೆ ಹೊರಗೆ ಬಸವೇಶ್ವರ ಮೂರ್ತಿ ಇದೆ. ಅದರ ಸುತ್ತಲೂ ನೀರಿದ್ದು, ಆ ನೀರಿನಲ್ಲಿ ಪಾದ ತೊಳೆದುಕೊಂಡು ನಮಾಜ್ ಮಾಡಲು ಹೋಗುತ್ತಿದ್ದಾರೆ ಎಂದು ಅಲ್ಲಿಯ ಭಕ್ತರೊಬ್ಬರು ನಾನು ಕಾಶಿಗೆ ಹೋಗಿದ್ದಾಗ ತಿಳಿಸಿದ್ದರು".
"ಇಲ್ಲಿ ಪರಂಪರೆ ಇದೆ, ಓಂ ನಮಃ ಶಿವಾಯ ಇವತ್ತಿಂದಲ್ಲ, ಸಾವಿರಾರು ವರ್ಷಗಳಿಂದ ವಿಶ್ವವನ್ನು ಕಾಯುತ್ತಿದೆ. ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂಗಳು ಯಾರೇ ಹೋದರೂ ಸಹ ಗರ್ಭಗುಡಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಅಲ್ಲಿ ಮಹಿಳೆಯರು ಸೀರೆ ಮತ್ತು ಪುರುಷರಿಗೆ ಪಂಜೆ ಸಮವಸ್ತ್ರ ಧರಿಸಿಕೊಂಡು ಬಂದರೆ ಮಹಾಕಾಲೇಶ್ವರನ ಅಭಿಷೇಕ ಮಾಡಲು ನಮ್ಮ ಕೈಯಲ್ಲಿ ತಂಬಿಗೆ ನೀರು ತುಂಬಿಸಲಾಗುತ್ತದೆ. ಭಕ್ತರು ಗರ್ಭಗುಡಿಯಲ್ಲಿನ ಮಹಾಕಾಲೇಶ್ವರನಿಗೆ ಅಭಿಷೇಕ ಮಾಡುವ ಪರಂಪರೆ ಇರುವುದು ನಮ್ಮ ದೇಶದಲ್ಲಿ ಮಾತ್ರ, ಅದು ಉಜ್ಜಯಿನಿಯ ಮಹಾ ಪರಂಪರೆ" ಎಂದು ನುಡಿದರು.
"ಮುಂಚಿನಿಂದಲೂ ಭಾರತ ಸ್ವಾಭಿಮಾನದ ಬದುಕು ಬೆಳೆಸಿಕೊಂಡು ಬಂದ ದೇಶ. ಮುಸ್ಲಿಮರು, ಬ್ರಿಟಿಷರು ದೇಶದ ಮೇಲೆ ದಾಳಿ ಮಾಡಿದರು. ಈಶ್ವರನ ಲಿಂಗ ಒಡೆದು ಪುಡಿ ಪುಡಿ ಮಾಡಿದರು. ಅಯೋಧ್ಯೆ ರಾಮನ ದೇವಸ್ಥಾನ ಪುಡಿ ಪುಡಿ ಮಾಡಿದರು. ಆದರೆ ಏನೇ ಮಾಡಿದರೂ ಕೂಡ ಇಲ್ಲಿ ಮತ್ತೆ ಪುನರುಜ್ಜೀವನ ಆಗುತ್ತಿದೆ. ಸಮಯ ಸಿಕ್ಕರೆ ಕಾಶಿ ದರ್ಶನ ಮಾಡಿ, ಅದನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ" ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.