ಹಾವೇರಿ ಇಬ್ಬರ ಮೇಲಿನ ಹಲ್ಲೆ ಪ್ರಕರಣ: ಎಸ್ಪಿ ಹೇಳಿದ್ದಿಷ್ಟು ಹಾವೇರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಜೋಡಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಐವರು ಯುವಕರ ವಿರುದ್ಧ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ನಲ್ಲಿ ಜೋಡಿಯೊಂದು ಇದ್ದ ವೇಳೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕೆಲವರು ನೀಡಿದ ಮಾಹಿತಿ ಮೇರೆಗೆ ಯುವಕರ ಗುಂಪು ಏಕಾಏಕಿ ಲಾಡ್ಜ್ಗೆ ನುಗ್ಗಿದ್ದು, ನೀರು ಬರುತ್ತಿದ್ದೆಯಾ ಎಂದು ಚೆಕ್ ಮಾಡುವ ನೆಪದಲ್ಲಿ ರೂಂ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಬಳಿಕ ರೂಂಗೆ ನುಗ್ಗಿ ಜೋಡಿ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿತ್ತು. ನಂತರ ಮಹಿಳೆಯನ್ನು ಲಾಡ್ಜ್ನಿಂದ ಹೊರಗೆ ಕರೆದುಕೊಂಡು ಬಂದು ಅವಾಜ್ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಕುರಿತಂತೆ ಪೊಲೀಸರು ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಎಸ್ಪಿ ಹೇಳಿದ್ದಿಷ್ಟು: ಜನವರಿ 8 ರಂದು ಹಾನಗಲ್ ತಾಲೂಕಿನ ಖಾಸಗಿ ಹೋಟೆಲ್ವೊಂದಕ್ಕೆ ನುಗ್ಗಿದ್ದ ಐದಾರು ಯುವಕ ತಂಡ, ಅಲ್ಲಿ ತಂಗಿದ್ದ ಜೋಡಿಯೊಂದರ ಮೇಲೆ ಹಲ್ಲೆ ಮಾಡಿದ್ದು, ಈ ಬಗ್ಗೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ದೂರು ನೀಡಿದ್ದರು. ಅವರು ನೀಡಿದ ದೂರು ಆಧರಿಸಿ ಇದೀಗ ಎಫ್ಆರ್ಐ ಕೂಡ ದಾಖಲಾಗಿದೆ. ಲೈಂಗಿಕ ದೌರ್ಜನ್ಯ ಬಗ್ಗೆ ಮಹಿಳೆ ಯಾವುದೇ ದೂರು ನೀಡಿಲ್ಲ, ಸದ್ಯ ಮಹಿಳೆಯ ಹೇಳಿಕೆಯನ್ನು ಪಡೆಯಲಾಗಿದೆ. ಪ್ರಕರಣ ಸಂಬಂಧ ಐವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ಮೂವರಿಗೆ ಶೋಧ ನಡೆಸಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಂಶುಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನೈತಿಕ ಪೊಲೀಸ್ಗಿರಿ: ಅಕ್ಕ-ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ, 7 ಮಂದಿ ವಶಕ್ಕೆ
ಇತ್ತೀಚೆಗೆ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದು ನಡೆದಿತ್ತು. ಬೆಳಗಾವಿ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದ ಅಕ್ಕ, ತಮ್ಮನನ್ನು ಪ್ರೇಮಿಗಳೆಂದು ತಿಳಿದು ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ಯುವಕನನ್ನು ಶೆಡ್ನಲ್ಲಿ ಕೂಡಿ ಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಈ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು 17 ಜನ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, 7 ಜನರನ್ನು ಬಂಧಿಸಿದ್ದರು.