ಹಾವೇರಿ : ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 60 ಅಭ್ಯರ್ಥಿಗಳು ಸ್ಪರ್ಧೆಗೆ ಮುಂದಾಗಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಸ್ಪರ್ಧೆಗೆ ಮುಂದಾಗಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾವೇರಿ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 10 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಶಿಗ್ಗಾಂವಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧೆ:ಬ್ಯಾಡಗಿ ಮತ್ತು ಹಿರೇಕೆರೂರಿನಲ್ಲಿ ತಲಾ 07 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾವೇರಿ ಜಿಲ್ಲೆಯ ಆರು ವಿಧಾನಸಭೆಯ ಕ್ಷೇತ್ರಗಳಲ್ಲಿ ಸಿಎಂ, ಸಚಿವ ಮತ್ತು ಮಾಜಿ ಸಚಿವರು ಸ್ಪರ್ಧೆಯಲ್ಲಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಇಲ್ಲಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಸತತ ಮೂರು ಬಾರಿ ಜಯ ಗಳಿಸಿರುವ ಬೊಮ್ಮಾಯಿ ನಾಲ್ಕನೇಯ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಅಖಾಡದಲ್ಲಿದ್ದಾರೆ.
ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಬಿ ಸಿ ಪಾಟೀಲ್ ಮತ್ತೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಹಾನಗಲ್‌ನಲ್ಲಿ ಕಾಂಗ್ರೆಸ್ಸಿನಿಂದ ನಾಲ್ಕು ಬಾರಿ ಶಾಸಕರಾಗಿ ಜಯಿಸಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಹಾವೇರಿಯಲ್ಲಿ ಒಂದು ಬಾರಿ ಶಾಸಕರಾಗಿ ಸಚಿವರಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ.
ರಾಣೆಬೆನ್ನೂರಲ್ಲಿ ಎನ್‌ಸಿಪಿಯಿಂದ ಆರ್ ಶಂಕರ್ ಭಾಗಿ: ಇನ್ನು ಬ್ಯಾಡಗಿಯಲ್ಲಿ ಈಗಾಗಲೇ ಒಂದು ಬಾರಿ ಜಯಿಸಿದ್ದ ಮತ್ತು ಸಚಿವರಾಗಿದ್ದ ಬಸವರಾಜ್ ಶಿವಣ್ಣನವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ರಾಣೆಬೆನ್ನೂರಲ್ಲಿ ಒಂದು ಬಾರಿ ಸಚಿವರಾಗಿ ಒಂದು ಬಾರಿ ಶಾಸಕರಾಗಿದ್ದ ಆರ್ ಶಂಕರ್ ಎನ್‌ಸಿಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಾಜಿ ಸಚಿವರು, ಹಾಲಿ ಸಚಿವರು ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿದ್ದಾರೆ.