ಹಾವೇರಿ:ಕಳೆದ ವರ್ಷ ಚರ್ಮಗಂಟು ರೋಗದಿಂದ ಸಾವಿರಾರು ಜಾನುವಾರುಗಳು ಮರಣ ಹೊಂದಿದ್ದವು. ಸಹಸ್ರಾರು ಜಾನುವಾರುಗಳು ಈ ರೋಗದಿಂದ ಚೇತರಿಕೆಯನ್ನೂ ಕಂಡಿದ್ದವು. ಆದರೆ, ಜಾನುವಾರುಗಳು ಮೊದಲಿನಂತೆ ಲವಲವಿಕೆಯಿಂದ ಇಲ್ಲ. ಅಷ್ಟೇ ಅಲ್ಲ ಕೆಲವು ಹಸುಗಳು ಗರ್ಭ ಧರಿಸುತ್ತಿಲ್ಲ. ಇದಕ್ಕೆ ಜಾನುವಾರುಗಳು ಸದೃಢವಾಗದೇ ಇರುವುದರಿಂದ ಸರಿಯಾಗಿ ಗರ್ಭ ಧರಿಸುತ್ತಿಲ್ಲ.
ಪಶು ವೈದ್ಯರು ಹೇಳುವುದೇನು?:ಈ ಕುರಿತು ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಲಂಪಿಸ್ಕಿನ್ ಕಾಣಿಸಿಕೊಂಡಿದ್ದ ಹಸುಗಳು ಸಾಮಾನ್ಯ ಹಸುಗಳಂತೆ ಸದೃಢವಾಗಿಲ್ಲ. ಅಲ್ಲದೇ ಬೆದೆಗೆ ಬರುತ್ತಿಲ್ಲ. ಬೆದೆಗೆ ಬಂದರೂ ಗರ್ಭಧರಿಸುತ್ತಿಲ್ಲ ಎಂಬ ಸಮಸ್ಯೆಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಈ ಬಗ್ಗೆ ನಾವು ತಪಾಸಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.
25 ಸಾವಿರ ಜಾನುವಾರುಗಳಿಗೆ ಲಂಪಿ ಸ್ಕಿನ್:ಹಾವೇರಿ ಜಿಲ್ಲೆಯಲ್ಲಿ ಒಟ್ಟು 25 ಸಾವಿರ ಜಾನುವಾರುಗಳಿಗೆ ಚರ್ಮಗಂಟುರೋಗ ಕಾಣಿಸಿಕೊಂಡಿತ್ತು. ಅವುಗಳಲ್ಲಿ 2,594 ಜಾನುವಾರುಗಳು ರೋಗದಿಂದ ಮರಣವನ್ನಪ್ಪಿದ್ದಾವೆ ಎಂದು ಡಾ. ಎಸ್. ವಿ. ಸಂತಿ ತಿಳಿಸಿದರು. ಇವುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡು ಹಸುಗಳಲ್ಲಿ ಫಲವಂತಿಕೆ ಕಡಿಮೆಯಾಗಿರುವ ಕುರಿತಂತೆ ರೈತರು ತಿಳಿಸಿದ್ದಾರೆ ಎನ್ನುತ್ತಾರೆ ಸಂತಿ. ಈ ಕುರಿತಂತೆ ಸ್ಪಷ್ಟ ಅಧ್ಯಯನ ವಾಗಬೇಕಿದೆ. ಸರಿಯಾದ ಅಧ್ಯಯನವಾದರೆ ಸರಿಯಾದ ಮಾಹಿತಿ ಸಿಗಲಿದೆ. ಜಿಲ್ಲೆಯಲ್ಲಿ ಚರ್ಮಗಂಟುರೋಗ ಕಾಣಿಸಿಕೊಂಡ ಹಸುಗಳಲ್ಲಿ ಪ್ರತಿಶತ 5 ರಿಂದ 10 ರಷ್ಟು ಹಸುಗಳಿಗೆ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ.