ಹಾವೇರಿ:ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸ್ತುತ ವರ್ಷದ ಕಾರ್ಣಿಕ ನುಡಿ ನಿಜವಾಗಿದೆ. 2023 ರ ಫೆಬ್ರುವರಿಯಲ್ಲಿ ನಡೆದ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ರಾಮಣ್ಣ ಅಂಬಲಿ ಅಳಿಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದಿದ್ದು ಅದರಂತೆ ಈ ವರ್ಷದ ಮಳೆ ಬೆಳೆ ಮತ್ತು ರಾಜಕೀಯ ವಿಶ್ಲೇಷಣೆ ಮಾಡಲಾಗಿತ್ತು.
ಕಾರ್ಣಿಕವನ್ನು ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ರಾಜಕೀಯ ಮುಖಂಡರು ಕುರುಬ ಸಂಕೇತವಾದ ಕಂಬಳಿ ಕಾರ್ಣಿಕದಲ್ಲಿ ಬಳಕೆಯಾಗಿದೆ. ಇದರಿಂದ ಈ ಕುರುಬ ಸಮಾಜಕ್ಕೆ ಉನ್ನತ ಸ್ಥಾನ ಸಿಗಲಿದೆ ಎಂದು ವಿಶ್ಲೇಷಣೆ ಮಾಡಿದ್ದರು.
ಈ ಕುರಿತಂತೆ ಮಾತನಾಡಿದ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ನುಡಿ ಸತ್ಯವಾಗಿದೆ ಎಂದು ವಿವರಣೆ ನೀಡಿದರು. ಅಂಬಲಿ ಹಳಸಿತು ಎಂದರೆ ರಾಜಕೀಯ ವಲಯದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತೆ ಕಂಬಳಿ ಬೀಸಿತಲೇ ಎಂದರೇ ಕಂಬಳಿ ಕುರುಬ ಸಮಾಜಕ್ಕೆ ಪವಿತ್ರವಾದದ್ದು ಅದು ಬೀಸುವುದರಿಂದ ಎಲ್ಲ ತಿಳಿಯಾಗುತ್ತದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಮೂಲಕ ಕುರುಬ ಸಮಾಜ ಉನ್ನತ ಹುದ್ದೆ ಅಲಂಕರಿಸಲಿದೆ ಎಂದು ತಿಳಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತುತ ಮುಖ್ಯಮಂತ್ರಿಯಾಗುತ್ತಿರುವದನ್ನು ಮೈಲಾರಲಿಂಗೇಶ್ವರ ಫೆಬ್ರವರಿಯಲ್ಲಿ ನುಡಿದಿದ್ದಾನೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು. ಮೈಲಾರಲಿಂಗೇಶ್ವರನೇ ಗೊರವಯ್ಯನ ರೂಪದಲ್ಲಿ ಬಂದು ಕಾರ್ಣಿಕ ನುಡಿಯುತ್ತಾನೆ. ಕಾರ್ಣಿಕ ನುಡಿಯುವ ಗೊರವಪ್ಪ ಹಲವು ದಿನಗಳ ಕಾಲ ಉಪವಾಸವಿದ್ದು. ಕೇವಲ ಬಾಳೆಹಣ್ಣು ಮತ್ತು ಭಂಡಾರದ ನೀರು ಕುಡಿದು ಕಾರ್ಣಿಕ ದಿನದಂದು 16 ಅಡಿಯ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾರೆ.