ಕರ್ನಾಟಕ

karnataka

ETV Bharat / state

ಮೂರು ವರ್ಷಗಳಿಂದ ಸೇವೆ ನಿಲ್ಲಿಸಿದ ಶ್ರದ್ಧಾಂಜಲಿ ವಾಹನ: ಹಣ ನೀಡಿ ಹೆಣ ಸಾಗಿಸುವ ಪರಿಸ್ಥಿತಿ ನಿರ್ಮಾಣ - etv bharat kannada

ಹಾವೇರಿ ಜಿಲ್ಲೆಯಲ್ಲಿ ಶ್ರದ್ದಾಂಜಲಿ ವಾಹನ ಮೂರು ವರ್ಷಗಳಿಂದ ಕೆಟ್ಟು ನಿಂತಿದ್ದು, ಜನರಿಗೆ ತೊಂದರೆಯಾಗಿದೆ.

ಶ್ರದ್ದಾಂಜಲಿ ವಾಹನ
ಶ್ರದ್ದಾಂಜಲಿ ವಾಹನ

By

Published : Jul 6, 2023, 9:11 AM IST

Updated : Jul 7, 2023, 9:44 AM IST

ಶ್ರದ್ಧಾಂಜಲಿ ವಾಹನ ಸೇವೆ ಸ್ಥಗಿತ

ಹಾವೇರಿ: ಸರ್ಕಾರಗಳು ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ ಅವುಗಳಲ್ಲಿ ಕೆಲ ಯೋಜನೆಗಳು ಬಡವರಿಗೆ ಮುಟ್ಟಿದರೆ ಇನ್ನೂ ಕೆಲವು ಗಗನಕುಸುಮವೇ. ಕೆಲವೊಮ್ಮೆ ತಾಂತ್ರಿಕ ಕಾರಣಗಳು, ಮತ್ತೆ ಕೆಲವು ಸಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆಗಳು ಜನರ ಬಳಿಗೆ ತಲುಪುವುದಿಲ್ಲ. ಇಂತಹ ಯೋಜನೆಗಳಲ್ಲೊಂದು ಶ್ರದ್ದಾಂಜಲಿ ವಾಹನ.

ಹಾವೇರಿ ಜಿಲ್ಲಾಸ್ಪತ್ರೆಗೆ ಸರ್ಕಾರ 2016ರಲ್ಲಿ ಶ್ರದ್ದಾಂಜಲಿ ವಾಹನ ಸೌಲಭ್ಯ ನೀಡಿತ್ತು. ಬಡರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ ಅವರ ಸಂಬಂಧಿಕರು ಶವವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಈ ಯೋಜನೆ ಜಾರಿಗೆ ತರಲಾಗಿತ್ತು. ಜಿಲ್ಲಾಸ್ಪತ್ರೆಯಿಂದ ವ್ಯಕ್ತಿಯ ಶವವನ್ನು ಆತನ ಸ್ವಗ್ರಾಮದವರೆಗೆ ಈ ವಾಹನ ಉಚಿತವಾಗಿ ಸಾಗಿಸುತ್ತಿತ್ತು.

2017ರಲ್ಲಿ ಹಾವೇರಿ ಜಿಲ್ಲಾಸ್ಪತ್ರೆಗೆ ಬಂದ ವಾಹನ ಕಾರ್ಯನಿರ್ವಹಿಸಿದ್ದು ಕೆಲವೇ ಕೆಲದಿನಗಳ ಕಾಲ ಮಾತ್ರ. ಚಾಲಕರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಶ್ರದ್ದಾಂಜಲಿ ವಾಹನ ಮೂಲೆ ಸೇರಿತು. ಇದೀಗ ನಿಂತಲ್ಲಿಯೇ ಹಾಳಾಗಲಾರಂಭಿಸಿದೆ. ಬಡವರು 5 ಸಾವಿರ 10 ಸಾವಿರ ರೂಪಾಯಿ ಹಣ ತೆತ್ತು ತಮ್ಮ ಸಂಬಂಧಿಕರ ಶವವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗುವ ಪರಿಸ್ಥಿತಿ ಈಗಿನದ್ದು.

ವಾಹನ ಕೆಟ್ಟು ಮೂರು ವರ್ಷಗಳಾದರೂ ಯಾರೂ ಗಮನ ಹರಿಸಿಲ್ಲ. ನಿಂತಲ್ಲಿ ನಿಂತಿರುವ ಶ್ರದ್ದಾಂಜಲಿ ವಾಹನ ತುಕ್ಕು ಹಿಡಿದು, ಧೂಳು ತಿನ್ನುತ್ತಿದೆ. ಪ್ರತಿ ತಿಂಗಳು ಕನಿಷ್ಠ ಹತ್ತರಿಂದ ಗರಿಷ್ಠ ಮೂವತ್ತೈದು ಶವಗಳನ್ನು ಈ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಅಪಘಾತ, ಅನಾರೋಗ್ಯ ಸೇರಿದಂತೆ ಮತ್ತಿತರೆ ಕಾರಣಗಳಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಬಂದು, ಚಿಕಿತ್ಸೆ ಫಲಿಸದೆ ಮೃತಪಟ್ಟವರ ಶವಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಬಡವರಿಗೆ ಸಹಾಯವಾಗಿದ್ದ ಶ್ರದ್ದಾಂಜಲಿ ವಾಹನ ಮೂರು ವರ್ಷಗಳಿಂದ ಕೆಟ್ಟು ನಿಂತಿದೆ. ವಾಹನ ದುರಸ್ಥಿ ಮಾಡೋ ಕಾರ್ಯ ಮಾತ್ರ ಆಗುತ್ತಿಲ್ಲ.

ಜಿಲ್ಲಾಸ್ಪತ್ರೆಗೆ ಬರುವ ಬಡರೋಗಿಗಳು ಸಾವನ್ನಪ್ಪಿದರೆ ಮೃತನ ಸಂಬಂಧಿಕರು ಸಾವಿರಾರು ರೂಪಾಯಿ ನೀಡಿ ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ಹೋಗುತ್ತಿದ್ದಾರೆ. ಮೃತದೇಹಗಳನ್ನು ಒಯ್ಯಲು ಖಾಸಗಿ ವಾಹನಗಳ ಮಾಲೀಕರು ಮನಬಂದಂತೆ ದುಡ್ಡು ಕೇಳ್ತಿದ್ದಾರೆ. ಮೃತರ ಊರು ಹತ್ತು, ಇಪ್ಪತ್ತು ಕಿ.ಮೀ ದೂರವಿದ್ರೂ ಸಹ ಮೂರು, ನಾಲ್ಕು ಸಾವಿರ ರೂಪಾಯಿ ಕೇಳ್ತಿದ್ದಾರೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದು ಚಿಕಿತ್ಸೆ ಫಲಿಸದೆ ಮೃತಪಟ್ಟವರ ಸಂಬಂಧಿಕರು ಊರಿಗೆ ಶವ ತೆಗೆದುಕೊಂಡು ಹೋಗಲು ಹೆಚ್ಚು ಹಣ ತೆರಬೇಕಾಗಿದೆ. ಸರ್ಕಾರ ಕೂಡಲೇ ಶ್ರದ್ದಾಂಜಲಿ ವಾಹನದ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಪ್ರತಿಕ್ರಿಯಿಸಿ, "ಸರ್ಕಾರ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಡವರಿಗೆ ನೆರವಾಗಲು ಶ್ರದ್ದಾಂಜಲಿ ವಾಹನ ನೀಡಿತ್ತು. ಬೆಳಗಾವಿಯಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ಬಂದಿದ್ದ ಆಂಬ್ಯುಲೆನ್ಸ್ ವಾಹನವನ್ನು ಶ್ರದ್ಧಾಂಜಲಿ ವಾಹನವನ್ನಾಗಿ ಪರಿವರ್ತಿಸಲಾಗಿತ್ತು. 2019ರ ಮೇ ತಿಂಗಳವರೆಗೂ ಶ್ರದ್ಧಾಂಜಲಿ ವಾಹನ ಬಡವರು ಮತ್ತು ಅನಾಥರಿಗೆ ಅನುಕೂಲ ಆಗಿತ್ತು. ಆದ್ರೆ ಮೂರು ವರ್ಷಗಳಿಂದ ನಿಂತಲ್ಲೇ ನಿಂತಿದೆ. ಬಹುತೇಕ ರಾಜ್ಯದಲ್ಲಿ ಶ್ರದ್ಧಾಂಜಲಿ ವಾಹನ ಬಂದ್ ಆಗಿವೆ. ಸರ್ಕಾರ ಹೊಸ ವಾಹನ ನೀಡಿದರೆ ನಾವು ಶ್ರದ್ಧಾಂಜಲಿ ವಾಹನವನ್ನು ಓಡಿಸುತ್ತೇವೆ. ಈ ಕುರಿತಂತೆ ಸಭೆ ನಡೆದಾಗ ಮೇಲಿನ ಅಧಿಕಾರಿಗಳಿಗೆ ಪ್ರಸ್ತಾಪ ಮಾಡಿದ್ದೇವೆ. ಸರ್ಕಾರಕ್ಕೆ ಪತ್ರ ಬರೆದಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆ್ಯಂಬುಲೆನ್ಸ್ ಸಿಗದೆ ತಂದೆ ಸಾವು: ಆ್ಯಂಬುಲೆನ್ಸ್ ಖರೀದಿಸಿ​ ಜನರಿಗೆ ಉಚಿತ ಸೇವೆ ಒದಗಿಸಿದ ವ್ಯಕ್ತಿ!

Last Updated : Jul 7, 2023, 9:44 AM IST

ABOUT THE AUTHOR

...view details