ಹಾವೇರಿಯ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ ಹಾವೇರಿ:ರಾಜ್ಯಾದ್ಯಂತ ಶಿವರಾತ್ರಿಯನ್ನ ಭಕ್ತರು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಿದ್ದಾರೆ. ಏಲಕ್ಕಿ ನಗರಿ ಹಾವೇರಿಯಲ್ಲಿ ಶಿವರಾತ್ರಿ ಸಂಭ್ರಮ ಮನೆಮಾಡಿದ್ದು. ಮುಂಜಾನೆಯಿಂದಲೇ ಭಕ್ತರು ಶಿವನದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಪುರಸಿದ್ದೇಶ್ವರನ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸಿದ್ದೇಶ್ವರನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು. ಶಿವರಾತ್ರಿ ಅಂಗವಾಗಿ ಪುರಸಿದ್ದೇಶ್ವರನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶನಿವಾರ ಮುಂಜಾನೆಯಿಂದಲೇ ಹಾಲಿನ ಅಭಿಷೇಕ, ರುದ್ರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಮಾಡಲಾಯಿತು. ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿನ ಶಿವಲಿಂಗ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು.
ಇಲ್ಲಿಯ ಶಿವಲಿಂಗುವಿಗೆ ಭಕ್ತರು ನೇರವಾಗಿ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಶಿವಲಿಂಗುವಿಗೆ ಹಾಲಿನ ಅಭಿಷೇಕ ಮಾಡಿ. ಬಾಳೆಹಣ್ಣು, ದ್ರಾಕ್ಷಿಹಣ್ಣು ಸೇರಿದಂತೆ ಹಣ್ಣುಗಳ ನೈವೇದ್ಯ ಅರ್ಪಿಸಿದರು. ಬಿಲ್ವಪತ್ರೆಯ ದಳಗಳನ್ನು ಶಿವಲಿಂಗುವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು. ದೀಪಗಳನ್ನು ಹಚ್ಚಿ ಶಿವಲಿಂಗುವಿಗೆ ಬೆಳಗಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.
12 ಜ್ಯೋತಿರ್ಲಿಂಗಗಳಿಗೆ ವಿಶೇಷ ಅಲಂಕಾರ:ಇನ್ನು, ಬಸವೇಶ್ವರ ನಗರದ ಸಿ ಬ್ಲಾಕ್‌ನಲ್ಲಿರುವ ಶಿವನ ದೇಗುಲಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಇಲ್ಲಿ ಭಕ್ತರು ಪರಮೇಶ್ವರನ ಬೃಹತ್ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಮುಚ್ಚಯದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿನ 12 ಜ್ಯೋತಿರ್ಲಿಂಗಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ತಮಿಳುನಾಡು ರಾಮನಾಥೇಶ್ವರ ಜ್ಯೋತಿರ್ಲಿಂಗ, ಗುಜರಾತ್ ಸೋಮನಾಥೇಶ್ವರ ಜ್ಯೋತಿರ್ಲಿಂಗ, ಆಂಧ್ರಪ್ರದೇಶದ ಶ್ರೀಶೈಲ್ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಮಧ್ಯಪ್ರದೇಶದಲ್ಲಿರುವ ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಾಳ್ವಪ್ರದೇಶದಲ್ಲಿರುವ ಓಂಕಾರೇಶ್ವರ ಜ್ಯೋತಿರ್ಲಿಂಗ, ಉತ್ತರಾಖಂಡದ ಕೇದಾರನಾಥ್ ಜ್ಯೋತಿರ್ಲಿಂಗ, ಮಹಾರಾಷ್ಟ್ರದ ಭೀಮಶಂಕರ್ ಜ್ಯೋತಿರ್ಲಿಂಗ, ಉತ್ತರಪ್ರದೇಶದ ಕಾಶಿಯಲ್ಲಿರುವ ವಿಶ್ವನಾಥ್ ಜ್ಯೋತಿರ್ಲಿಂಗ, ಮಹಾರಾಷ್ಟ್ರದ ತ್ರಿಯಂಬಕೇಶ್ವರ ಜ್ಯೋತಿರ್ಲಿಂಗ, ಜಾರ್ಖಂಡ್ ವೈದ್ಯನಾಥ್ ಜ್ಯೋತಿರ್ಲಿಂಗ, ಗುಜರಾತ್‌ನ ನಾಗಶ್ವಲ್ ಜ್ಯೋತಿರ್ಲಿಂಗ, ಮಹಾರಾಷ್ಟ್ರದ ಘೃಷ್ಣೇಶ್ವರ ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ಭಕ್ತರು ಕಣ್ತುಂಬಿಕೊಂಡರು.
ಶಿವರಾತ್ರಿ ಅಂಗವಾಗಿ ಈ ಎಲ್ಲ ಲಿಂಗುಗಳಿಗೆ ವಿಶೇಷ ಅಭಿಷೇಕ ಮಾಡಿ, ವಿವಿಧ ಪದಾರ್ಥಗಳಿಂದ ನೈವೇದ್ಯ ಅರ್ಪಿಸಲಾಯಿತು. ನಂತರ ದೇವಸ್ಥಾನಕ್ಕೆ ಆಗಮಿಸಿದ ಹಾವೇರಿ ಬಣ್ಣದಮಠದ ಅಭಿನವ ಮಲ್ಲಿಕಾರ್ಜುನಶ್ರೀಗಳನ್ನ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಸಮುಚ್ಚಯದಲ್ಲಿರುವ ದೇವಸ್ಥಾನಗಳಿಗೆ ತೆರಳಿದ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಶಿವನ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಶ್ರೀಗಳು ದ್ವಾದಶ ಜ್ಯೋತಿರ್ಲಿಂಗಗಳಿಗೆ ಪೂಜೆ ಸಲ್ಲಿಸಿದರು.
ಶಿವರಾತ್ರಿಯನ್ನ ಶಿವನಾಮಸ್ಮರಣೆಯೊಂದಿಗೆ ಆಚರಿಸಬೇಕು:ಅಭಿನವ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಶಿವರಾತ್ರಿ ಶಿವನ ಆರಾಧನೆಗೆ ಮೀಸಲಾದ ಹಬ್ಬ. ಈ ದಿನ ಭಕ್ತರು ವಿಶೇಷವಾದ ಸಂಕಲ್ಪ ಮಾಡಿ ಕಷ್ಟುಗಳನ್ನ ಬವಣೆಗಳನ್ನ ದೇವರ ಮುಂದೆ ಇಟ್ಟರೆ ದೇವರು ಸಕಲ ಕಷ್ಟಗಳನ್ನ ದೂರ ಮಾಡುತ್ತಾನೆ. ಶಿವನಿಗೆ 108 ಬಿಲ್ವ ಪತ್ರೆಗಳಿಂದ ಪೂಜೆ ಸಲ್ಲಿಸಿದರೆ ಮನುಷ್ಯನ 108 ತೊಂದರೆಗಳು ದೂರವಾಗುತ್ತವೆ. ಹಿರಿಯರು ಶಿವನ ಅರಾಧನೆಗೆ ಮಾಡಿದ ಶಿವರಾತ್ರಿಯನ್ನ ಶಿವನಾಮ ಸ್ಮರಣೆಯೊಂದಿಗೆ ಆಚರಿಸಬೇಕು. ಬಿಲ್ವಪತ್ರೆ ಅರ್ಪಿಸಿ, ಹಾಲಿನಾಭಿಷೇಕ ಮಾಡುವದರಿಂದ ಹಲವು ಕಷ್ಟಗಳು ಹಾಗೂ ಕಂಟಕಗಳು ನಿವಾರಣೆಯಾಗುತ್ತವೆ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ:LIVE: ಆದಿಯೋಗಿ ಪ್ರತಿಮೆ ಬಳಿ ಶಿವರಾತ್ರಿ ವಿಶೇಷ ಕಾರ್ಯಕ್ರಮ