ಹಾವೇರಿ: ರಾಜ್ಯ ಕಂಡ ದಾರ್ಶನಿಕ ಸಂತ ಕರ್ನಾಟಕದ ಕಬೀರ ಎಂದು ಕರೆಸಿಕೊಳ್ಳುವ ಶಿಶುನಾಳ ಶರೀಫರು ಜನಿಸಿದ್ದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ. ಜುಲೈ 3ರಂದು ಜನಿಸಿದ್ದ ಶಿಶುನಾಳ ಶರೀಫರು ನಿಧನರಾಗಿದ್ದು ಸಹ ಜುಲೈ 3 ರಂದೇ. ತತ್ವಪದಗಳ ಹರಿಕಾರ ಎಂದು ಕರೆಸಿಕೊಳ್ಳುವ ಶರೀಫರು ಅವರಿಗಿಂದು 202ನೇ ಜಯಂತಿ.
ಶಿಶುನಾಳ ಶರೀಫರ 202ನೇ ಜಯಂತಿ ಹಜರತ್ ಸಾಬ್ ಮತ್ತು ಹಜ್ಜೂಮಾ ದಂಪತಿಯ ಮಗನಾದ ಶರೀಫರು 1819 ಜುಲೈ 3 ರಂದು ಜನಿಸಿದ್ರು. ಚಿಕ್ಕವರಾಗಿದ್ದಾಗಲೇ ಚುರುಕಾಗಿದ್ದ ಶರೀಫರು ಮುಲ್ಕಿ ಪರೀಕ್ಷೆ ಪಾಸಾಗಿದ್ದರು. ನಂತರ ಬ್ರಾಹ್ಮಣ ಗುರು ಗೋವಿಂದ ಭಟ್ ರ ಶಿಷ್ಯರಾಗಿ ಕೋಮು ಸಾಮರಸ್ಯ ಸಾರಿದರು.
ಧರ್ಮವನ್ನ, ಅಧ್ಯಾತ್ಮವನ್ನ ಸಮಾಜದ ಎಲ್ಲ ವರ್ಗಗಳಿಗೆ ಬಡಿಸಿದ ಕೀರ್ತಿ ಇವರದು. ನಂತ ಶಿಶುನಾಳ ಶರೀಫರು ಗುರು ಗೋವಿಂದಭಟ್ಟರ ಶಿಷ್ಯರಾಗಿ ದೀಕ್ಷೆ ಪಡೆಯುವ ಮೂಲಕ ಸಂತರಾಗಿದ್ದು ಈಗ ಇತಿಹಾಸ. ತಮ್ಮ ತತ್ವಪದಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಶರೀಫರು ಶಿವಯೋಗಿಗಳಾದರು.
ತಮ್ಮ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿ, ಸಿದ್ದಾರೂಢರು ಸೇರಿದಂತೆ ಹಲವು ಸಂತರ ಜೊತೆ ಸೇರಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಶರೀಫರು ಗುರುತಿಸಿಕೊಂಡರು. ವಿಶೇಷವಾಗಿ ಹಿಂದು ಮುಸ್ಲಿಂ ಸಾಮರಸ್ಯದ ಪ್ರತೀಕವಾದವರು ಶಿಶುನಾಳ ಶರೀಫರು.
ಸಂಸಾರಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ ಶಿಶುನಾಳ ಶರೀಫರು ತಮ್ಮ ಜೀವನವನ್ನ ಸಮಾಜಕ್ಕೆ ಮೀಸಲಾಗಿಟ್ಟವರು. ಶಿಶುನಾಳಾಧೀಶನ ಅಂಕಿತ ತತ್ವಪದಗಳು ಶರೀಫರನ್ನು ಇಂದಿಗೂ ಜೀವಂತವಾಗಿರಿಸಿವೆ.
ಅವರು 1889ರಲ್ಲಿ ವಿಧಿವಶರಾದಾಗ ಶರೀಫರನ್ನ ಶಿಶುನಾಳದಲ್ಲಿ ಹಿಂದು ಮುಸ್ಲಿಂ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಯಿತು. ಶಿಶುನಾಳ ಶರೀಫರ ಗದ್ದುಗೆ ಇಂದಿಗೂ ಸಹ ಹಿಂದು ಮುಸ್ಲಿಂ ಭಾವೈಕ್ಯತೆಯ ತಾಣವಾಗಿದೆ.
ಗುರು ಗೋವಿಂದ ಭಟ್ ಮತ್ತು ಶಿಷ್ಯ ಶಿಶುನಾಳ ಶರೀಫರು ಗುರುಶಿಷ್ಯ ಸಂಬಂಧ ಉಳಿದ ಗುರುಶಿಷ್ಯರಿಗೆ ಮಾದರಿಯಾಗಿದೆ. ಶರೀಫರು ಜನಿಸಿದ ಶಿಶುನಾಳದ ಈ ಪ್ರದೇಶವನ್ನು ಶರೀಫಗಿರಿ ಎಂದು ಕರೆಯಲಾಗುತ್ತದೆ. ಇಲ್ಲಿ ಶರೀಫರ ಗದ್ದುಗೆ ಇದ್ದು ಭಕ್ತರು ಹಬ್ಬ ಹರಿದಿನಗಳಲ್ಲಿ ಜಾತ್ರೆಗಳಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಗುರು ಗೋವಿಂದ ಭಟ್ಟರ ಚಿತಾಭಸ್ಮವನ್ನ ಸಹ ಈ ಪ್ರದೇಶದಲ್ಲಿ ಇಡಲಾಗಿದೆ. ಗುರುಶಿಷ್ಯರ ದೇವಸ್ಥಾನ ನಿರ್ಮಿಸಲಾಗಿದ್ದು ಹಿಂದು ಮುಸ್ಲಿಂ ಭೇದ-ಭಾವವಿಲ್ಲದೆ ಇಲ್ಲಿಗೆ ಭಕ್ತರು ನಡೆದುಕೊಳ್ಳುತ್ತಾರೆ.