ಹಾವೇರಿ: ಕೋಮು ಸೌಹಾರ್ದತೆಯ ಜಾತ್ರೆ ಎಂದೇ ಹೆಸರಾಗಿರುವ ಕರ್ನಾಟಕದ ಕಬೀರ, ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಶಿಶುನಾಳ ಗ್ರಾಮದ ಶರೀಫ ಗಿರಿಯಲ್ಲಿ ನಡೆದ ಜಾತ್ರಾ ಮಹೋತ್ಸದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಗುರು ಗೋವಿಂದ ಭಟ್ ಮತ್ತು ಶಿಶುನಾಳ್ ಶರೀಫರ ಬೆಳ್ಳಿಯ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ತರಲಾಯಿತು. ಬಳಿಕ ರಥದ ಸುತ್ತ ಪ್ರದಕ್ಷಿಣೆ ಮಾಡಿ ಮೂರ್ತಿಗಳನ್ನು ರಥದಲ್ಲಿಟ್ಟು ಪೂಜಿಸಲಾಯಿತು. ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರು ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟರಿಗೆ ಜೈಕಾರ ಹಾಕಿದರು. ಹಿಂದೂ-ಮುಸ್ಲಿಮರು ಗುರು ಶಿಷ್ಯರ ರಥ ಎಳೆದರು.
ರಥ ಸಾಗುತ್ತಿದ್ದಂತೆ ಭಕ್ತರು ರಥದ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು ಹಾಗೂ ನಿಂಬೆ ಹಣ್ಣುಗಳನ್ನು ಎಸೆದು ಪ್ರಾರ್ಥನೆ ಸಲ್ಲಿಸಿದರು. ರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಮತ್ತು ಬೃಹತ್ ರುದ್ರಾಕ್ಷಿ ಮಾಲೆಗಳು ಗಮನ ಸೆಳೆದವು. ರಥ ಸಾಗುತ್ತಿದ್ದಂತೆ ಹರಹರ ಮಹಾದೇವ ಜಯಘೋಷಗಳು ಮೊಳಗಿದವು. ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಜಾತ್ರೋತ್ಸವದ ಅಂಗವಾಗಿ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟರ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಸಾಮರಸ್ಯದ ಪ್ರತೀಕ: ಶಿಶುನಾಳ ಶರೀಫರ ಗದ್ದುಗೆ ಹಾಗೂ ಗುರು ಗೋವಿಂದ ಭಟ್ರ ಮೂರ್ತಿ ದರ್ಶನ ಪಡೆದ ಭಕ್ತರು ಗುರು ಶಿಷ್ಯರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮರು ಸಕ್ಕರೆ ನೈವೇದ್ಯ ಮಾಡಿದರೆ, ಹಿಂದೂಗಳು ತೆಂಗಿನಕಾಯಿ ಹಾಗೂ ಬಾಳೆಹಣ್ಣು ನೈವೇದ್ಯ ಅರ್ಪಿಸಿದರು. ಹಿಂದೂಗಳು 'ಹರ ಹರ ಮಹಾದೇವ' ಎಂದು ಘೋಷಣೆ ಕೂಗಿದರೆ ಮುಸ್ಲಿಮರು 'ಈಶ್ವರ ಅಲ್ಲಾ ನೀನೇ ಎಲ್ಲಾ' ಎಂದು ನಮಿಸಿದರು. ದೂರದೂರುಗಳಿಂದ ಆಗಮಿಸಿದ ಭಕ್ತರಿಗೆ ಶಿಶುನಾಳ ಶರೀಫನ ಅನುಯಾಯಿಗಳು ಉಪಹಾರ ಸೇರಿದಂತೆ ಭೋಜನ ಹಂಚಿ ಹರಕೆ ತೀರಿಸಿದರು. ಈ ಜಾತ್ರೆಗೆ ಬರುವ ಭಕ್ತರು ತತ್ರಾಣಿ ತಗೆದುಕೊಂಡು ಹೋಗುವ ವಾಡಿಕೆ ಇದೆ. ಇಂದು(ಗುರುವಾರ) ಸಂಜೆ 5 ಗಂಟೆಗೆ ಕಡುಬಿನ ಕಾಳಗ ನಡೆಯುವ ಮೂಲಕ ಪ್ರಸ್ತುತ ವರ್ಷದ ರಥೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.