ಹಾವೇರಿ:ನಿನ್ನೆ ರಾಣೆಬೆನ್ನೂರಿನ ಭೀಮಪ್ಪ ಲಮಾಣಿ ಎಂಬುವವರ ಕುರಿದೊಡ್ಡಿಯಿಂದ 30 ಕುರಿಗಳು ಕಾಣೆಯಾಗಿದ್ದವು. ಇದೀಗ ರಟ್ಟೀಹಳ್ಳಿ ತಾಲೂಕಿನ ಬಡಸಂಗಾಪುರ ಗ್ರಾಮದಲ್ಲಿಯೂ ರಾತ್ರೋರಾತ್ರಿ ಕಳ್ಳರು ದೊಡ್ಡಿಗೆ ನುಗ್ಗಿ 15 ಕುರಿಗಳನ್ನು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಯುಗಾದಿ ಹಬ್ಬದ ದಿನವೇ ದೊಡ್ಡಿಗಳಿಂದ ಕುರಿಗಳು ಕಾಣೆಯಾಗುತ್ತಿರುವುದು, ಹೊಸ ತೊಡಕು ಆಚರಣೆಯ ಮಾರಾಟಕ್ಕಾಗಿ ಕದಿಯುತ್ತಿರುವ ಸಂಶಯ ಸೃಷ್ಟಿಸಿದೆ.
ತಮ್ಮ ಕುಟುಂಬದ ಸದಸ್ಯರಂತೆ ಸಾಕಿದ್ದ 30 ಕುರಿಗಳು ಕಾಣೆಯಾಗಿದ್ದಕ್ಕೆ ಭೀಮಪ್ಪ ಲಮಾಣಿ ಕಣ್ಣೀರಿಟ್ಟಿದ್ದರು. ಈಗ ಬಡಸಂಗಾಪುರ ಗ್ರಾಮದಲ್ಲಿಯೂ ಮಂಜುನಾಥ ಕೋಳೂರು ಎಂಬುವವರ ದೊಡ್ಡಿಯಲ್ಲಿ ಕಟ್ಟಿದ್ದ 15 ಕುರಿಗಳನ್ನು ಕಳ್ಳರು ಎತ್ತಂಗಡಿ ಮಾಡಿದ್ದಾರೆ. ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಕುರಿಗಳ ಕಳ್ಳತನವಾಗಿದೆ ಕುರಿಗಾಹಿ ಮಂಜುನಾಥ ಕೋಳೂರು ತಿಳಿಸಿದ್ದಾರೆ.