ಹಾವೇರಿ : ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ನಾವು ಮಾಡಿಕೊಂಡಿಲ್ಲ. ಸ್ವಾರ್ಥಿಗಳು ಜಾತಿ ವ್ಯವಸ್ಥೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾವೇರಿ ತಾಲೂಕು ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯ 904 ನೇ ಜಯಂತೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆ ಜಾತಿಯಲ್ಲಿ ಹುಟ್ಟಿದರೆ ಮೇಲು. ಈ ಜಾತಿಯಲ್ಲಿ ಹುಟ್ಟಿದರೆ ಕೀಳು ಎಂದು ಸ್ವಾರ್ಥಿಗಳು ಮಾಡಿದ್ದು ಎಂದು ಬೇಸರ ವ್ಯಕ್ತಪಡಿಸಿದರು.
ನಾವೆಲ್ಲ ಮನುಷ್ಯರು, ಮನುಷ್ಯ ಮನುಷ್ಯರಲ್ಲಿ ತಾರತಮ್ಯ ಇರಬಾರದು. ಕಾಯಕದ ಮೇಲೆ ಜಾತಿ ಮಾಡಿ, ಮೇಲು ಕೀಳು ಮಾಡಿರುವ ವ್ಯವಸ್ಥೆ ಬಗ್ಗೆ ಬಸವಾದಿಶರಣರು ಹೋರಾಟ ಮಾಡಿದರು. ಇಂತಹ ಹೋರಾಟದಲ್ಲಿ ಮೊದಲ ಪಂಕ್ತಿಯಲ್ಲಿ ನಿಂತಿರುವ ಶರಣರಲ್ಲಿ ಚೌಡಯ್ಯ ಸಹ ಒಬ್ಬರು. ಹೀಗಾಗಿ ಬಸವಣ್ಣ ಅಂಬಿಗರ ಚೌಡಯ್ಯನಿಗೆ ನಿಜಶರಣ ಎಂದು ಕರೆದರು ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಹೇಳಬೇಕಾದ ವಿಷಯವನ್ನ ಅತ್ಯಂತ ಧೈರ್ಯದಿಂದ ಹೇಳುತ್ತಿದ್ದರು. ಅಂಬಿಗರ ಚೌಡಯ್ಯ ಕುರಿತಂತೆ ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪ ರಚಿಸಿರುವ ಕವನವನ್ನ ಸಿದ್ದರಾಮಯ್ಯ ವಾಚನ ಮಾಡಿದರು. ಶರಣ ಎಂದರೆ ಜಾತಿ ಇಲ್ಲದಂತವನು, ವರ್ಗ ಇಲ್ಲದಂತವನು. ಇವರು ಯಾವುದೇ ಜಾತಿ, ಯಾವುದೇ ವರ್ಗ, ಯಾವುದೇ ಧರ್ಮ ಇಲ್ಲದವರು. ಅವರು ಮನುಷ್ಯ ವರ್ಗಕ್ಕೆ ಸೇರಿದವರು. ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಬಸವಾದಿ ಶರಣ ಮನುಷ್ಯ ಮನುಷ್ಯರನ್ನ ಪ್ರೀತಿಸಿದರು ಎಂದು ಹೇಳಿದರು.
ಹೀಗಾಗಿ ನಮ್ಮ ಸರ್ಕಾರವಿದ್ದಾಗ ಅಂಬಿಗರ ಚೌಡಯ್ಯ ಜಯಂತಿ ಮಾಡಲಾಯಿತು. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಡಲಾಯಿತು. ಯಾವ ಸಮಾಜಕ್ಕೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ಬರಬೇಕು. ಯಾವ ಸಮಾಜಕ್ಕೆ ಶಕ್ತಿ ಬರುವುದಿಲ್ಲ, ಆ ಸಮಾಜ ಮುಖ್ಯವಾಹಿನಿಗೆ ಬರುವುದಿಲ್ಲ. ಈ ಸಮಾಜ ಮುಖ್ಯವಾಹಿನಿಗೆ ಬರುವುದಿಲ್ಲ. ಸಮ ಸಮಾಜದ ಕನಸು ಕನಸಾಗಿಯೇ ಉಳಿಯುತ್ತದೆ. ಆ ಕನಸು ನನಸಾಗಬೇಕಾದರೆ ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರಿಗೆ ಬರಬೇಕು. ಬಸವಾದಿ ಶರಣರು ಎರಡು ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದಾರೆ. ಒಂದು ಕಾಯಕ ಮತ್ತೊಂದು ದಾಸೋಹ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾಯಕದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ದಾಸೋಹದ ಮೂಲಕ ಪ್ರತಿಯೊಬ್ಬರು ಹಂಚಿಕೊಳ್ಳಬೇಕು. ಜಾತಿ ವ್ಯವಸ್ಥೆ ನಿಂತ ನೀರು, ಚಲನೆಯಿಲ್ಲ ಏಕೆ ಎಂದರೆ ಅಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ಇರಲ್ಲ. ಯಾವಾಗ ಆರ್ಥಿಕ, ಸಾಮಾಜಿಕ ಚಟುವಟಿಕೆ ಆರಂಭವಾಗುತ್ತವೆ ಆಗ ಜಾತಿ ವ್ಯವಸ್ಥೆ ಚಲನೆಯಾಗುತ್ತದೆ. ಬಸವಾದಿ ಶರಣ ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಚಾಲನೆ ನೀಡಿದರು. ಹೀಗಾಗಿ, ಚಲನೆ ಸಿಕ್ಕಿತು. ನಂತರ ಚಲನೆ ಕಡಿಮೆಯಾಯಿತು ಎಂದು ಅವರು ಹೇಳಿದರು.
ಬಾವಿಯಲ್ಲಿ ನೀರು ತರಲು ಹೋದಾಗ ಕೊಡಕ್ಕೆ ಮೊದಲು ಬರುವುದು ಕಸ. ಅದನ್ನ ಸ್ವಚ್ಛಮಾಡಿ ನೀರು ತುಂಬಿದ ನಂತರ ಕೊಡ ಮೇಲಕ್ಕೆ ತರುತ್ತೇವೆ. ಆದರೆ ಮತ್ತೆ ನೀರಿಗಾಗಿ ಕೊಡ ಬಾವಿಗೆ ಬಿಟ್ಟರೆ, ಆ ಕಸ ಮೊದಲಿನಂತಾಗುತ್ತದೆ. ಅದೇ ರೀತಿ ಸಾಮಾಜಿಕ ಬದಲಾವಣೆ ಈ ರೀತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕಾಗಿ 800 ವರ್ಷಗಳ ಹಿಂದೆ ಇವನಾರವ ಇವನಾರವ ಎಂದೆಣಿಸದಿರಯ್ಯ. ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ ಎಂದು ನುಡಿದಿದ್ದರು. ಈಗ ಇವ ನಮ್ಮವ ಇವ ನಮ್ಮವ ಎನ್ನುವುದು ಹೋಗಿದೆ. ಬದಲಿಗೆ ಇವನಾರವ ಇವನಾರವ ಎನ್ನುವಂತಾಗಿದೆ. ನಾವು ಬಸವಾದಿ ಶರಣರಿಗೆ ಗೌರವ ನೀಡುವುದು ಎಂದರೆ ಅವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡುವುದು ಎಂದು ಅವರು ಹೇಳಿದರು.
ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ ಸಿಕ್ಕಾಗ ಮಾತ್ರ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿರುವುದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಸಾರ್ಥಕವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ದ ನಾವು ನಿಲ್ಲಬೇಕಾಗುತ್ತದೆ. ಬಿಜ್ಜಳನ ಆಸ್ಥಾನದಿಂದ ಬಸವಾದಿ ಶರಣರು ಏಕೆ ಓಡಿಹೋದರು. ಈ ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಬೇಕು. ಇದನ್ನ ಎಲ್ಲ ಸ್ವಾಮೀಜಿಗಳು ಜನರಿಗೆ ಹೇಳಬೇಕು. ಆಗ ಮಾತ್ರ ಸಮಾಜದಲ್ಲಿ ಸುಧಾರಣೆಯಾಗಲು ಸಾಧ್ಯ. ಇದಕ್ಕಾಗಿ ಸ್ವಾಮಿ ವಿವೇಕಾನಂದರು ಹಸಿದವರಿಗೆ ಅನ್ನ ನೀಡದ ಧರ್ಮ
ಧರ್ಮವೇ ಅಲ್ಲ ಎಂದು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಇದನ್ನೂ ಓದಿ:ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ