ಕರ್ನಾಟಕ

karnataka

ETV Bharat / state

ಹಸಿರು ಹೊತ್ತು ನಿಂತಿರುವ ಮರ-ಗಿಡಗಳು: ಕ್ಯಾಮರಾದಲ್ಲಿ ಸೆರೆಯಾದ ಸುಂದರ ದೃಶ್ಯಕಾವ್ಯ

ಹಾವೇರಿ ಜಿಲ್ಲೆಗೆ ಮುಂಗಾರು ಕಾಲಿಟ್ಟು ವಾರಗಳೇ ಕಳೆದಿವೆ. ವರುಣನ ಸಿಂಚನದಿಂದ ಮರ ಗಿಡಗಳು ಹಸಿರು ತೊಟ್ಟು ನಿಂತಿದ್ದು, ಛಾಯಾಗ್ರಹಣಕ್ಕೆ ಹಲವು ಅವಕಾಶಗಳಿವೆ.

krishnamriga
krishnamriga

By

Published : Jul 17, 2020, 9:20 AM IST

Updated : Jul 17, 2020, 10:35 AM IST

ಹಾವೇರಿ: ಮಳೆಗಾಲ ಬಂತು ಎಂದರೆ ಛಾಯಾಚಿತ್ರಗ್ರಾಹಕರಿಗೆ ಹಬ್ಬವೇ ಹಬ್ಬ. ಹಸಿರುತೊಟ್ಟ ಮರಗಿಡಗಳು ಕಣ್ಣಿಗೆ ಮುದ ನೀಡುತ್ತವೆ. ಹೂಗಳ ಮಕರಂದ ಹೀರುವ ದುಂಬಿಗಳು, ಗಾಳಿಗೆ ಅತ್ತ ಇತ್ತ ಸುಯ್ದಾಡುವ ಪುಷ್ಪಗಳ ಸುತ್ತಮುತ್ತ ಹಾರಾಡುವ ಪಾತರಗಿತ್ತಿಗಳು, ಮೋಡ ಕವಿಯುತ್ತಿದ್ದಂತೆ ಗರಿಬಿಚ್ಚಿ ಕುಣಿಯುವ ನವಿಲುಗಳ ನರ್ತನ, ಕಾಡಿನಿಂದ ರೈತನ ಹೊಲಗಳಿಗೆ ಬರುವ ಕೃಷ್ಣಮೃಗಗಳ ಸೆಣಸಾಟ ಹಾಗೂ ಜಿಗಿತ ದೃಶ್ಯಗಳು ರೋಮಾಂಚನ ತರುತ್ತವೆ.

ಮಳೆಗಾಲದಲ್ಲಿ ಛಾಯಾಗ್ರಹಣ

ಹಾವೇರಿ ಜಿಲ್ಲೆಗೆ ಮುಂಗಾರು ಕಾಲಿಟ್ಟು ವಾರಗಳೇ ಕಳೆದಿವೆ. ವರುಣನ ಸಿಂಚನದಿಂದ ಮರಗಿಡಗಳು ಹಸಿರು ತೊಟ್ಟು ನಿಂತಿವೆ. ವನ್ಯಜೀವಿ ಛಾಯಾಚಿತ್ರಗ್ರಾಹಕರಿಗಂತೂ ಛಾಯಾಗ್ರಹಣಕ್ಕೆ ಹಲವು ಅವಕಾಶಗಳಿರುತ್ತವೆ. ಪಾತರಗಿತ್ತಿಗಳ ಅಂದ ಚೆಂದ, ಹೂವಿನ ಜೊತೆಗೆ ಅವುಗಳ ಹೊಯ್ದಾಟ, ಹಸಿರು ಇಳೆ ಛಾಯಾಚಿತ್ರಗ್ರಾಹಕರಿಗೆ ಆಹ್ವಾನಿಸಿದಂತೆ ಭಾಸವಾಗುತ್ತದೆ.

ಈ ದಿನಗಳಲ್ಲಿ ಮೋಡಗಳ ಕಣ್ಣಾಮುಚ್ಚಾಲೆ ವರುಣನ ನೊಸಲಧಾರೆ ಇವುಗಳೆನ್ನೆಲ್ಲ ಕ್ಯಾಮರಾದಲ್ಲಿ ಸೆರೆಹಿಡಿಯುವುದು ಆದ್ಭುತವಾದ ಆನಂದ ನೀಡುತ್ತದೆ ಎನ್ನುತ್ತಾರೆ ವನ್ಯಜೀವಿ ಛಾಯಾಚಿತ್ರ ಗ್ರಾಹಕರು.

ಕೃಷ್ಣಮೃಗ ಅಭಯಾರಣ್ಯ
ಬಂಕಾಪುರ ನವಿಲುಧಾಮ

ರಾಜ್ಯದಲ್ಲಿರುವ ಎರಡೇ ಎರಡು ಕೃಷ್ಣಮೃಗ ಅಭಯಾರಣ್ಯಗಳಲ್ಲಿ ಒಂದು ಹಾವೇರಿ ಜಿಲ್ಲೆಯಲ್ಲಿದೆ. ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷ್ಣಮೃಗಗಳು ಹರಡಿಕೊಂಡಿವೆ. ಮಳೆಗಾಲದಲ್ಲಿ ರೈತರ ಜಮೀನುಗಳಿಗೆ ಬರುವ ಕೃಷ್ಣಮೃಗಗಳ ಹಿಂಡನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಅವುಗಳು ಕ್ಷಣದಲ್ಲಿ ಮಿಂಚಿನ ವೇಗದಲ್ಲಿ ಮರೆಯಾಗುವುದು ಹಾಗೂ ಅವುಗಳ ಓಟ ನಿಬ್ಬೆರಗಾಗಿಸುತ್ತದೆ. ಅವುಗಳ ನೆಗೆತ - ಕಾದಾಟದ ಚಿತ್ರಗಳನ್ನು ತಗೆದಷ್ಟು ಇನ್ನಷ್ಟು ತಗೆಯಬೇಕು ಎನ್ನುವ ಹಂಬಲ ಉಂಟಾಗುತ್ತದೆ ಎನ್ನುತ್ತಾರೆ ಛಾಯಾ ಚಿತ್ರಗ್ರಾಹಕರು.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿರುವ ನವಿಲುಧಾಮ ಛಾಯಾಚಿತ್ರಗ್ರಾಹಕರನ್ನ ಕೈಬೀಸಿ ಕರೆಯುತ್ತದೆ. ದೂರದಲ್ಲಿ ಗುಡುಗಿನ ಶಬ್ಧವಾಗುತ್ತಿದ್ದಂತೆ ಗರಿಬಿಚ್ಚಿ ಕುಣಿಯುವ ನವಿಲುಗಳ ನರ್ತನವಂತೂ ರೋಮಾಂಚನವನ್ನು ಉಂಟುಮಾಡುತ್ತವೆ. ಪ್ರಕೃತಿಯಲ್ಲಿನ ಸೊಬಗು ಸೆರೆಹಿಡಿಯುವ ಛಾಯಾಚಿತ್ರಗ್ರಾಹಕರಿಗಂತೂ ಮಳೆಗಾಲ ರಮ್ಯ ಕಾಲವೇ ಸರಿ.

Last Updated : Jul 17, 2020, 10:35 AM IST

ABOUT THE AUTHOR

...view details