ಹಾವೇರಿ:ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿದ್ದ ಡಾ.ಶಾಂತನಿಂದ ಗರ್ಭಕೋಶ ಕಳೆದುಕೊಂಡಿದ್ದ ಮಹಿಳೆಯರಿಗೆ ಸರ್ಕಾರದಿಂದ 40 ಕೋಟಿ ಪರಿಹಾರ ಧನ ಮಂಜೂರಾಗಿತ್ತು. ಆದರೆ, ಆ ಹಣ ಸಂತ್ರಸ್ತರಿಗೆ ವಿತರಣೆಯಾಗದೇ ವಾಪಸ್ ಸರ್ಕಾರಕ್ಕೆ ಹೋಗಿದ್ದು, ಇದರಿಂದ ಬೇಸತ್ತ ಮಹಿಳೆಯರು ಅದನ್ನು ಮತ್ತೆ ಮಂಜೂರುಗೊಳಿಸುವಂತೆ ಒತ್ತಾಯಿಸಿ ಶಿಗ್ಗಾವಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಏನಿದು ಘಟನೆ:8 ವರ್ಷಗಳ ಹಿಂದೆ ರಾಣೆಬೆನ್ನೂರು ತಾಲೂಕು ಆಸ್ಪತ್ರೆಗೆ ವಿವಿಧ ಕಾರಣಗಳಿಗಾಗಿ ಬರುತ್ತಿದ್ದ ಬಡ ಮಹಿಳೆಯರ ಗರ್ಭಕೋಶಕ್ಕೆ ಇಲ್ಲಿಯ ಸರ್ಕಾರಿ ವೈದ್ಯ ಡಾ.ಶಾಂತ ಕತ್ತರಿ ಹಾಕಿದ್ದಾನೆ. ಹಣದ ದಾಹಕ್ಕಾಗಿ ಈ ವೈದ್ಯ 1,522 ಮಹಿಳೆಯರ ಗರ್ಭಕೋಶವನ್ನು ಕಿತ್ತಿದ್ದಾರೆ. ಮದುವೆಯಾದ ಮಹಿಳೆಯರು ಮಾತ್ರವಲ್ಲದೇ ಮದುವೆಯಾಗದ ಮಹಿಳೆಯರ ಗರ್ಭಕೋಶವನ್ನೂ ಹಣಕ್ಕಾಗಿ ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲಿ ಯಾವುದೇ ಕಾಯಿಲೆಗೆ ಹೋದರೂ ಅವರ ಗರ್ಭಕೋಶಕ್ಕೆ ಕತ್ತರಿ ಬೀಳುತ್ತಿತ್ತು.
ಡಾ.ಶಾಂತ ವಿರುದ್ಧ ಮಹಿಳೆಯರು ಎಷ್ಟೇ ಹೋರಾಟ ಮಾಡಿದರೂ, ಅದಕ್ಕೆ ಇನ್ನೂ ಜಯ ಸಿಕ್ತಿಲ್ಲ. ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಜೀವವನ್ನೂ ಕಳೆದುಕೊಂಡಿದ್ದಾರೆ. ವಿಪರ್ಯಾಸ ಎಂದರೆ ಈ ಮಹಿಳೆಯರಿಗಾಗಿ ಸರ್ಕಾರ 40 ಕೋಟಿ ರೂಪಾಯಿ ಪರಿಹಾರ ಧನವನ್ನು ಬಿಡುಗಡೆ ಮಾಡಿತ್ತು. ಆದರೆ, ಸ್ಥಳೀಯ ಆರೋಗ್ಯ ಅಧಿಕಾರಿಗಳ ಅಸಹಕಾರದಿಂದ ಮಂಜೂರಾಗಿದ್ದ ಹಣವೂ ವಾಪಸ್ ಸರ್ಕಾರಕ್ಕೆ ಹೋಗಿದೆ. ಈ ಎಲ್ಲ ಕಾರಣಗಳಿಂದ ಬೇಸತ್ತ ಮಹಿಳೆಯರು ಇದೀಗ ಬೊಮ್ಮಾಯಿಯವರ ಮನೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.