ಹಾವೇರಿ :ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಐತಿಹಾಸಿಕ ಹಿನ್ನೆಲೆ ಇರುವ ಗ್ರಾಮ. ಇಲ್ಲಿಯ ಕಾಂತೇಶ ದೇವಸ್ಥಾನ ವಿಶ್ವಪ್ರಸಿದ್ದಿಯಾಗಿದೆ. ಈ ಗ್ರಾಮದಲ್ಲಿ 135 ವರ್ಷಗಳ ಹಿಂದೆ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಇತ್ತು. ಈ ಶಾಲೆ ಕಳೆದ ಕೆಲವರ್ಷಗಳಿಂದ ಮಳೆಗಾಲದಲ್ಲಿ ಸೋರಲಾರಂಭಿಸಿದೆ. ಮಳೆಯಿಂದ ಶಾಲೆ ಹಾಳಾಗಲಾರಂಭಿಸಿದೆ. ಪರಿಣಾಮ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ.
ಮಳೆಯಿಂದ ಹಾಳಾದ ಶಾಲೆಯೊಳಗೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹೋಗಲು ಹೆದರಲಾರಂಭಿಸಿದ್ದಾರೆ. ಪರಿಣಾಮ ಶಾಲೆಯ ಅಕ್ಕಪಕ್ಕದಲ್ಲಿದ್ದ ಮರಗಳ ನೆರಳಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಕಳೆದ ಎರಡು ಮೂರು ದಶಕಗಳ ಹಿಂದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲೆಯ ದುರಾವಸ್ಥೆ ಕಂಡು ಇದನ್ನು ಸರಿಪಡಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹಲವು ಬಾರಿ ಮನವಿ ಸಲ್ಲಿಸಿ ಬೇಸತ್ತ ವಿದ್ಯಾರ್ಥಿಗಳು ತಾವು ಕಲಿತ ಶಾಲೆ ದುರಸ್ತಿಗೆ ತಾವೇ ಮುಂದೆ ಬಂದಿದ್ದಾರೆ. ಶಾಲೆ ಹಾಳಾಗುತ್ತಿರುವುದನ್ನ ಕಂಡ ಶಾಲೆ ಹಳೆಯ ವಿದ್ಯಾರ್ಥಿಗಳು ಮಾಜಿ ವಿದ್ಯಾರ್ಥಿಗಳ ಸಂಘ ಕಟ್ಟಿಕೊಂಡು ಶಾಲೆಯ ದುರಸ್ತಿಗೆ ನಿಂತಿದ್ದಾರೆ.
ಶಾಲೆಯಲ್ಲಿ ಕಲಿತುಹೋಗಿ ಉನ್ನತ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಈ ಶಾಲೆಯಲ್ಲಿ ಕಲಿತ
ವಿದ್ಯಾರ್ಥಿಗಳು ಈಗ ಆರ್‌ಟಿಓ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ವ್ಯಾಪಾರದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಇವರೆಲ್ಲರ ಸಹಾಯಧನ ಸಂಘಕ್ಕೆ ಹರಿದುಬಂದಿದೆ. ಈ ರೀತಿ ಶಾಲೆಯ ದುರಸ್ತಿಗೆ ಸುಮಾರು ಐದುನೂರಕ್ಕೂ ಅಧಿಕ ಮಾಜಿ ವಿದ್ಯಾರ್ಥಿಗಳು ಒಂದು ಕೋಟಿ 18 ಲಕ್ಷ ರೂಪಾಯಿ ಹಣ ನೀಡಿದ್ದಾರೆ.