ರಾಣೆಬೆನ್ನೂರು: ಶಿಕ್ಷಕರು ಬೇಕೆಂದು ವಿದ್ಯಾರ್ಥಿಗಳು ಶಾಲೆಯ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡಿದ ಘಟನೆ ರಾಣೆಬೆನ್ನೂರು ತಾಲೂಕಿನ ಜೋಹಿಸರಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿಕ್ಷಕರ ಕೊರತೆ ನೀಗಿಸಲು ಆಗ್ರಹಿಸಿ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ.. - ಜೋಹಿಸರಹರಳಹಳ್ಳಿ ಗ್ರಾಮ
ಮೂರು ವರ್ಷದಿಂದ ಶಾಲೆಯಲ್ಲಿ ಇಂಗ್ಲೀಷ್ ಹಾಗೂ ವಿಜ್ಞಾನ ಶಿಕ್ಷಕರಿಲ್ಲ. ಹಾಗಾಗಿ ಕೂಡಲೇ ತಮಗೆ ಶಿಕ್ಷಕರ ಕೊರತೆ ನೀಗಿಸಬೇಕೆಂದು ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 150 ವಿದ್ಯಾರ್ಥಿಗಳು ಹೊಂದಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೇವಲ ನಾಲ್ಕು ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಗ್ಲೀಷ್, ವಿಜ್ಞಾನ ಶಿಕ್ಷಕರು ಮೂರು ವರ್ಷದಿಂದ ಈ ಶಾಲೆಯಲ್ಲಿ ಇಲ್ಲ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತಿದೆ. ಇದರ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮೇಲಿನ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆ ಮಾಡದೆ ಇರುವುದರಿಂದ ಇಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ನಂತರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ವಿದ್ಯಾರ್ಥಿಗಳು ಅವರ ಕಾರನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಶಿಕ್ಷಕರ ಕೊರತೆಯಿದೆ. ಇದನ್ನ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಇನ್ನೆರಡು ದಿನಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ್ ತಿಳಿಸಿದ್ದಾರೆ.