ಸವಣೂರಿನ ಸಿಹಿ ವೀಳ್ಯದೆಲೆ ಭಾರಿ ಫೇಮಸ್.. ದೇಶ ವಿದೇಶಕ್ಕೂ ರಫ್ತು! ಹಾವೇರಿ:ವೀಳ್ಯದೆಲೆ ಬೆಲೆ ಗಗನಕ್ಕೇರಿದ್ದು, 75 ರೂಪಾಯಿಗೆ ಸಿಗುತ್ತಿದ್ದ ವೀಳ್ಯದೆಲೆ ಇದೀಗ 150 ರೂಪಾಯಿ ಗಡಿ ದಾಟಿದೆ. ಬೇಡಿಕೆಗೆ ತಕ್ಕಂತೆ ವೀಳ್ಯದೆಲೆ ಬೆಳೆಯದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ ವೀಳ್ಯದೆಲೆಗೆ ಬಂಪರ್ ಬೆಲೆ ಬಂದಿರುವುದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ವೀಳ್ಯದೆಲೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಮೂರು ನಾಲ್ಕು ತಿಂಗಳು ಅಧಿಕ ಮಳೆಯಿಂದ ವೀಳ್ಯದೆಲೆ ಬಳ್ಳಿಗಳು ಹಾಳಾಗಿ ಹೋಗಿದ್ದವು. ಕೆಲ ಬಳ್ಳಿಗಳಂತೂ ಅಧಿಕ ಮಳೆಯಿಂದ ಕೊಳೆತು ಹೋಗಿದ್ದವು. ಈಗ ಮಳೆಯಿಲ್ಲದ ಕಾರಣ ಬೆಳೆ ಚೆನ್ನಾಗಿ ಆಗಿದ್ದು, ಬೆಲೆಯೂ ಅಧಿಕವಾಗಿದೆ. ಇದರಿಂದ ಅಧಿಕ ಲಾಭ ಸಿಗುತ್ತಿದೆ ಎಂದು ಸವಣೂರಿನ ವೀಳ್ಯದೆಲೆ ಬೆಳೆಗಾರರು ಹೇಳುತ್ತಿದ್ದಾರೆ.
ಸವಣೂರು ವೀಳ್ಯದೆಲೆ ಇತಿಹಾಸ:ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ವೀಳ್ಯದೆಲೆಗೆ ಅದರದೇ ಆದ ಇತಿಹಾಸವಿದೆ. ಸವಣೂರು ಖಾರ ಹೇಗೆ ಪ್ರಸಿದ್ಧವೋ ಹಾಗೆಯೇ ಸವಣೂರು ತಾಲೂಕು ವೀಳ್ಯದೆಲೆ ಬೆಳೆಯುವಲ್ಲಿ ಪ್ರಸಿದ್ಧವಾಗಿದೆ. ಇಲ್ಲಿ ಬೆಳೆಯುವ ವೀಳ್ಯದೆಲೆ ಸವಣೂರಿನ ನವಾಬರ ಕಾಲದಿಂದಲೂ ಪಾಕಿಸ್ತಾನದ ಕರಾಚಿ ಸೇರಿದಂತೆ ವಿದೇಶಗಳಿಗೆ ರಫ್ತಾಗುತ್ತಿದೆ. ಪ್ರಸ್ತುತ ಆಂಧ್ರಪ್ರದೇಶ, ಗುಜರಾತ್, ವಡೋದರ್ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೂ ಕೂಡ ಮಾರಾಟ ಮಾಡಲಾಗುತ್ತಿದೆ.
ಇನ್ನೂ ಸವಣೂರು ವೀಳ್ಯದೆಲೆಗೆ ಅದರದ್ದೇ ಆದ ರುಚಿ ಇದೆ. ಉಳಿದ ಎಲೆಗಳಂತೆ ಇದು ಖಾರವಾಗಿ ಇರುವುದಿಲ್ಲ, ಬದಲಿಗೆ ಸಿಹಿಯಾಗಿರುತ್ತದೆ. ಹಾಗಾಗಿ ಅಡಕೆ ಜೊತೆ ವೀಳ್ಯದೆಲೆ ಹಾಕಿಕೊಂಡು ತಿಂದರೆ ಅದರ ರುಚಿನೇ ಬೇರೆ. ಇಲ್ಲಿಯ ಫಲವತ್ತಾದ ಮಣ್ಣು, ಹವಾಮಾನದಿಂದಾಗಿ ವೀಳ್ಯದೆಲೆಗೆ ಈ ರುಚಿ ಬಂದಿದೆಯಂತೆ. ಇಲ್ಲಿಯ ಎಲೆಯನ್ನು ಬೀಡ ಕಟ್ಟಲು ಬಳಸುವುದಿಲ್ಲ. ಸವಣೂರು ತಾಲೂಕಿನಲ್ಲಿ ಬೆಳೆಯುವ ಎಲೆ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅಡಿಕೆ ಎಲೆ ಹಾಕಿಕೊಳ್ಳಲು ಬಳಸಲಾಗುತ್ತದೆ.
ಇದನ್ನೂ ಓದಿ:ಹವಾಮಾನಕ್ಕೆ ತಕ್ಕಂತೆ ಬೆಳೆ.. ಮಿಶ್ರ ಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕಲಬುರಗಿ ರೈತ
ಈ ಎಲೆಗಳು ಧಾರವಾಡ, ಬೆಳಗಾವಿ, ಕಲಬುರಗಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೆ ಪೂರೈಕೆಯಾಗುತ್ತದೆ. ಇಲ್ಲಿಯ ವೀಳ್ಯದೆಲೆ ಬೆಳೆಗಾರರು ನೈಸರ್ಗಿಕ ವಿಧಾನದಲ್ಲಿ ಬಳ್ಳಿಗಳನ್ನು ಬೆಳೆಯುತ್ತಾರೆ. ಎಕರೆಗೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚು ಮಾಡಿ ವೀಳ್ಯದೆಲೆ ಬಳ್ಳಿಗಳನ್ನು ಹಚ್ಚಲಾಗುತ್ತದೆ. ಎರಡು ವರ್ಷದ ನಂತರ ವೀಳ್ಯದ ಎಲೆಗಳು ಸಿಗುತ್ತವೆ. ಸರಿಯಾಗಿ ನಿರ್ವಹಣೆ ಮಾಡಿದರೆ ಎಲ್ಲ ಖರ್ಚು ತೆಗೆದು ವರ್ಷಕ್ಕೆ 1 ಲಕ್ಷ 50 ಸಾವಿರ ರೂಪಾಯಿ ಆದಾಯ ಪಡೆಯಬಹುದು.
ಒಮ್ಮೆ ಹಚ್ಚಿದ ಬಳ್ಳಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ 10 ವರ್ಷಗಳ ಕಾಲ ಎಲೆಗಳನ್ನು ಪಡೆಯಬಹುದು. ಸವಣೂರು ತಾಲೂಕಿನಲ್ಲಿ ಇನ್ನೂರಕ್ಕೂ ಅಧಿಕ ಎಕರೆ ತೋಟಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಈ ರೀತಿ ಬೆಳೆದ ವೀಳ್ಯದೆಲೆಗಳನ್ನು ಕಾರಡಗಿ ಎಲೆ ಮಾರುಕಟ್ಟೆಗೆ ಮಾರಾಟಕ್ಕೆ ತರಲಾಗುತ್ತದೆ. ಭಾನುವಾರ ಬುಧವಾರ ಮತ್ತು ಶುಕ್ರವಾರ ವಾರದ ಮೂರು ದಿನಗಳ ಕಾಲ ಇಲ್ಲಿ ಎಲೆಗಳ ಪೆಂಡಿಗಳಲ್ಲಿನ ಅಕಾರ ಬಣ್ಣ ನೋಡಿ ದರ ನಿಗದಿ ಮಾಡಲಾಗುತ್ತದೆ.
ಕಾರಡಗಿ, ಸವಣೂರು, ಚಿಲ್ಲೂರು, ಮತ್ತೂರು, ಬಡ್ನಿಯ ತೋಟಗಳಿಂದ ಇಲ್ಲಿಯ ಮಾರುಕಟ್ಟೆಗೆ ಎಲೆಯ ಪೆಂಡಿಗಳು ಬರುತ್ತವೆ. ಅವುಗಳನ್ನು ಪರಿಶೀಲಿಸುವ ದಲಾಲರು 10 ಸಾವಿರದಿಂದ ಹಿಡಿದು ಮೂವತ್ತು ಸಾವಿರ ರೂಪಾಯಿವರೆಗೆ ದರ ನಿಗದಿ ಮಾಡುತ್ತಾರೆ. ಸವಣೂರಿನ ತೋಟಗಳಲ್ಲಿ ಹೊಸಬಳ್ಳಿಗಳಲ್ಲಿ ಬಿಡುವ ಎಲೆಗಳನ್ನು ಕರಾಚಿ ಸೇರಿದಂತೆ ವಿದೇಶಗಳಿಗೆ ರಪ್ತು ಮಾಡಲಾಗುತ್ತದೆ. ಪ್ರಸ್ತುತ ವರ್ಷ ಅಧಿಕ ಮಳೆ ಸುರಿದ ಪರಿಣಾಮ ಹೊಸಬಳ್ಳಿಗಳಿಂದ ಹೇಳಿಕೊಳ್ಳುವಂತಹ ಎಲೆಗಳು ಬಂದಿಲ್ಲ. ಅಧಿಕ ಮಳೆಯಿಂದ ಬಳ್ಳಿ ಕೊಳೆತ ಪರಿಣಾಮ ಎಲೆಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ದರ ಸಹ ಅಧಿಕವಾಗಿದೆ. ಈಗ ಬಳ್ಳಿ ಹಚ್ಚಿದರೂ ಅದರ ಫಸಲು ಬರಲು ಎರಡು ವರ್ಷ ಬೇಕಾಗುತ್ತದೆ ಎಂದು ವೀಳ್ಯದೆಲೆ ಬೆಳೆಗಾರರು ಹೇಳುತ್ತಾರೆ.
ಇದನ್ನೂ ಓದಿ:ಇಸ್ರೇಲ್ ಮಾದರಿ ಟೊಮೆಟೊ ಬೆಳೆದು ಬಂಪರ್ ಲಾಭ ಪಡೆದ ರೈತ...!