ಹಾವೇರಿ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ನಿನ್ನೆಯಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೆಲವೆಡೆ ಸರ್ವರ್ ಸಮಸ್ಯೆ ತಲೆದೋರಿದೆ. ಈ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
"ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಸರ್ವರ್ ಸಮಸ್ಯೆ ಕಂಡುಬಂದರೆ ಸರಿಪಡಿಸಲು ಕಾಲಾವಕಾಶ ಬೇಕು. ಎಲ್ಲವನ್ನೂ ಒಮ್ಮೆಲೆ ಸರಿಪಡಿಸುತ್ತೇವೆ ಎಂದರೆ ಆಗದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 15 ದಿನ ಆಗಿದೆ. ತಾಂತ್ರಿಕ ತೊಂದರೆ ಇದ್ದೇ ಇರುತ್ತೆ, ಸಮಸ್ಯೆ ಪರಿಹಾರವಾಗಲು ಎರಡ್ಮೂರು ತಿಂಗಳಾದರೂ ಕಾಯಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ ಮಾಡಿಲ್ಲ, ಇಂದು ಸರ್ವರ್ ಸಿಗದವರು ನಾಳೆ ಹೋಗಿ ಅರ್ಜಿ ಹಾಕಬಹುದು" ಎಂದರು.
ಅಕ್ಕಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಕೈಗೊಳ್ಳುವ ಕುರಿತು ಮಾತನಾಡಿ, ಸದ್ಯಕ್ಕೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಸದ್ಯದಲ್ಲಿಯೇ ಎಲ್ಲ ಬಗೆಹರಿಸುತ್ತೇವೆ. ಬಡವರಿಗೆ ಅಕ್ಕಿ ವಿತರಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ. ಬಿಜೆಪಿಯವರು ಪ್ರತಿಭಟನೆ ನಡೆಸುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಜನತೆಗೆ ಅಕ್ಕಿ ನೀಡುವುದು ಬಿಜೆಪಿಗೆ ಸಂಬಂಧಿಸಿದ ವಿಚಾರವಲ್ಲ. ಪ್ರತಿಭಟನೆ ಮಾಡಿದರೆ ಅಥವಾ ಲೋಕಸಭೆಯಲ್ಲಿ ಹೋರಾಟ ಮಾಡಿದ್ರೆ ಸಮಸ್ಯೆ ಬಗೆಹರಿಯುವುದಿಲ್ಲ. ನಮ್ಮ ಸರ್ಕಾರ ಈಗಾಗಲೇ ಹಲವು ರಾಜ್ಯಗಳ ಜೊತೆ ಮಾತುಕತೆ ನಡೆಸಿದೆ, ಕಾಲಾವಕಾಶ ಬೇಕು ಎಂದು ತಿಳಿಸಿದರು.