ಹಾವೇರಿ:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗುತ್ತಿದೆ. ಜನ ಬಿಜೆಪಿಯಿಂದ ಭ್ರಮನಿರಸನರಾಗಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗದಂತಹ ಕೇಂದ್ರ ಸರ್ಕಾರದ ತಪ್ಪುಗಳನ್ನು ಮತದಾರರಿಗೆ ತಲುಪಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಮಾಡಿದ ಭ್ರಷ್ಟಾಚಾರಗಳನ್ನು ತನಿಖೆ ಮಾಡಿಸುತ್ತೇವೆ. ಸರ್ಕಾರ ಬಂದು ಇನ್ನೂ 30 ದಿನ ಆಗಿಲ್ಲ, ನಮಗೆ ಸ್ವಲ್ಪ ಸಮಯ ನೀಡಿ. ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸುತ್ತೇವೆ. ಕಾಂಗ್ರೆಸ್ ಪಕ್ಷ ಯಾವತ್ತೂ ಹೊಂದಾಣಿಕೆ ರಾಜಕೀಯ ಮಾಡಿಲ್ಲ, ಪಕ್ಷದ ಶಕ್ತಿಯಿಂದ ವಿಧಾನಸಭೆಯ 135 ಸ್ಥಾನ ಗೆದ್ದಿದ್ದೇವೆ. ಇನ್ನೂ 15 ಸ್ಥಾನ ಬರಬೇಕಾಗಿತ್ತು. ಕಾಂಗ್ರೆಸ್ ಸಿದ್ಧಾಂತ, ವಿಚಾರಧಾರೆ ಹಾಗೂ ಕಾರ್ಯಕ್ರಮಗಳ ಮೇಲೆ ನಾವು ಮತ ಕೇಳಿದ್ದೇವು ಎಂದು ಹೇಳಿದರು.
ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮತದಾರರ ಮನೆ ಮನೆಗೆ ಹೋಗಿ ನಾವು ಹೇಳಿದ್ದೇವೆ. ಬಿಜೆಪಿ ಸರ್ಕಾರದಿಂದ ಭ್ರಮನಿರಸನರಾಗಿದ್ದ ಜನರು ಕಾಂಗ್ರೆಸ್ ಕಾರ್ಯಗಳಿಗೆ ಆಶೀರ್ವಾದ ಮಾಡಿದ್ದಾರೆ. ಜನರಿಗೆ ನಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂಬ ವಿಶ್ವಾಸವಿದೆ. ಮೊದಲನೇ ಗ್ಯಾರಂಟಿ ಯೋಜನೆಯನ್ನ ನಾವು ಜಾರಿಗೆ ಮಾಡಿದ್ದೇವೆ. ಇದನ್ನ ದೇಶದಲ್ಲಿನ ಜನ ಸ್ವಾಗತ ಮಾಡಿದ್ದಾರೆ. ಇದು ಮಹಿಳೆಯರಿಗೆ ನೀಡಿದ ದೊಡ್ಡ ಶಕ್ತಿಯಾಗಿದೆ. ಇನ್ನುಳಿದ ನಾಲ್ಕು ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.