ಹಾವೇರಿ:ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ನಿಧನರಾದರು. ಅವರು ಓದಿದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಂಪಾ ಶಾಲೆಗೆ ಬಂದಾಗಿನ ನೆನಪುಗಳನ್ನು ಉಪಾಧ್ಯಾಯರು ನೆನೆದು ಕಣ್ಣೀರು ಹಾಕಿದರು.
ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ 1939 ಜೂನ್ 18ರಂದು ಹತ್ತಿಮತ್ತೂರಿನಲ್ಲಿ ಜನಿಸಿದ ಚಂಪಾ, ಪ್ರಾಥಮಿಕ ಶಿಕ್ಷಣವನ್ನ ಹತ್ತಿಮತ್ತೂರು ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ್ದರು. ನಂತರ ಐದರಿಂದ 10ನೇ ತರಗತಿಯನ್ನ ಹಾವೇರಿಯ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದರು. ಜಿ ಹೆಚ್ ಕಾಲೇಜ್ ಸೇರಿದಂತೆ ಧಾರವಾಡದಲ್ಲಿ ಮುಂದಿನ ವ್ಯಾಸಂಗ ಮಾಡಿದರು.
ಬಂಡಾಯ ಸಾಹಿತಿಯಾಗಿ, ವಿಮರ್ಶಕರಾಗಿ, ನಾಟಕಗಾರರಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮದೇ ಸ್ಥಳೀಯ ಭಾಷೆಯಿಂದ ಸಾಕಷ್ಟು ಗಮನ ಸೆಳೆದಿದ್ದರು. ಅವರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ಸಹ ತಮ್ಮ ಸ್ಥಳೀಯ ಭಾಷೆಯನ್ನ ಬಿಟ್ಟಿರಲಿಲ್ಲ. ಹಾವೇರಿಗೆ ಬಂದಾಗಲೆಲ್ಲ ಸಾಹಿತಿ ಸತೀಶ್ ಕುಲಕರ್ಣಿ, ಹಿರಿಯ ಪತ್ರಕರ್ತ ಮಾಲತೇಶ್ ಅಂಗೂರು ಅವರೊಂದಿಗೆ ಚಂಪಾ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದರು. ಹಾವೇರಿಗೆ ಬಂದಾಗಲೆಲ್ಲಾ ತಾವು ಓದಿದ ಮುನ್ಸಿಪಲ್ ಹೈಸ್ಕೂಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಯಾಗುತ್ತಿದ್ದರು. ಹಾವೇರಿಗೆ ಬಂದಾಗ್ಲೂ ಸಾಹಿತಿ ಸತೀಶ್ ಕುಲಕರ್ಣಿ ಮತ್ತು ಮಾಲತೇಶ್ ಅಂಗೂರು ಸೇರಿದಂತೆ ಸಾಹಿತಿಗಳನ್ನು ಕರೆದುಕೊಂಡು ತಮ್ಮ ಗ್ರಾಮ ಹತ್ತಿಮತ್ತೂರುಗೆ ಹೋಗುತ್ತಿದ್ದರು.