ರಾಣೆಬೆನ್ನೂರು (ಹಾವೇರಿ): ಕೊರೊನಾ ನಡುವೆತಮ್ಮ ಸ್ವಂತ ಊರುಗಳಿಗೆ ಹಾಗೂ ಬೇರೆ ಜಿಲ್ಲೆಗೆ ತೆರಳಲು ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆ ರಾಣೆಬೆನ್ನೂರಿನ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಜನ ಸಾಮಾಜಿಕ ಅಂತರ ಮರೆತು ಪಾಸ್ ಪಡೆಯಲು ಮುಗಿಬಿದ್ದ ಘಟನೆ ನಡೆದಿದೆ.
ಪಾಸ್ ಪಡೆಯಲು ರಾಣೆಬೆನ್ನೂರು ತಹಶೀಲ್ ಕಚೇರಿಯಲ್ಲಿ ನೂಕು ನುಗ್ಗಲು - Corona lockdown
ರಾಜ್ಯದಲ್ಲಿ ಕೊರೊನಾ ಭೀತಿಯ ನಡುವೆಯೂ ಗ್ರೀನ್ ಝೋನ್ ಜಿಲ್ಲೆಯಲ್ಲಿ ಕಾರ್ಮಿಕರಿಗೆ ನೆರವಾಗಲು ಜಿಲ್ಲಾಡಳಿತದ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆ ಲಾಕ್ಡೌನ್ನಿಂದ ಸಿಲುಕಿರುವ ಜನರಿಗೆ ತಮ್ಮ ಊರಿಗೆ ತೆರಳಲು ಹಾಗೂ ಬೇರೆ ಜಿಲ್ಲೆಗೆ ಸಂಚರಿಸಲು ಸಹಾಯಕವಾಗಿದೆ. ಆದರೆ ಇದಕ್ಕಾಗಿ ಅನುಮತಿ ಪಾಸ್ ಪಡೆಯಲು ರಾಣೆಬೆನ್ನೂರು ತಹಶೀಲ್ದಾರ್ ಕಚೇರಿಯಲ್ಲಿ ನೂಕು ನುಗ್ಗಲು ಏರ್ಪಟ್ಟಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನೆರೆ ಜಿಲ್ಲೆಗೆ ತೆರಳಲು ಮತ್ತು ಸಂಬಂಧಿಕರ ಮರಳಿ ಕರೆಸಿಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ತಾಲೂಕು ಆಡಳಿತದ ಮೂಲಕ ಅನುಮತಿ ಪಾಸ್ ನೀಡಲಾಗುತ್ತಿದೆ. ಈ ಅನುಮತಿ ಪಾಸ್ ಪಡೆಯಲು ನಗರ ಸೇರಿದಂತೆ ತಾಲೂಕಿನ ಜನರು ಕಳೆದ ಮೂರು ದಿನಗಳಿಂದ ತಹಶೀಲ್ದಾರ್ ಕಚೇರಿಯಲ್ಲಿ ಸರದಿ ನಿಲ್ಲುತ್ತಿದ್ದಾರೆ.
ಆದರೆ ಇಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಪಾಸ್ ಪಡೆಯಲು ನಿಂತಿರುವುದು ಕಂಡುಬರುತ್ತಿದೆ. ಸದ್ಯ ಹಾವೇರಿ ಜಿಲ್ಲೆ ಗ್ರೀನ್ ಝೋನ್ನಲ್ಲಿದೆ. ಈ ಹಿನ್ನೆಲೆ ಜನತೆ ಸಹ ನಮಗೆ ಯಾವುದೇ ಭಯವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ವ್ಯವಸ್ಥೆ ಸರಿಪಡಿಸಬೇಕಿದೆ.