ಹಾವೇರಿ:ಉತ್ತರ ಕರ್ನಾಟಕದ ಜಾನಪದ ಸೊಗಡಿನ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳನ್ನ ಅದರ ಮಾಲೀಕರು ಮತ್ತು ಅಭಿಮಾನಿಗಳು ಸೆಲೆಬ್ರಿಟಿಗಳಂತೆ ನೋಡಿಕೊಳ್ಳುತ್ತಾರೆ. ಈ ರೀತಿಯ ಹೋರಿಯನ್ನು ಮನೆಗೆ ತಂದ ದಿನವನ್ನು ಜನ್ಮದಿನವಾಗಿ ಆಚರಿಸುವುದು ವಾಡಿಕೆ.
ಈ ರೀತಿ ದನಬೆದರಿಸುವ ಸ್ಪರ್ಧೆಯಲ್ಲಿ ದೂಳೆಬ್ಬಿಸಿದ್ದ ಹೋರಿ ರಾಕ್ಸ್ಟಾರ್ ಜನ್ಮದಿನವನ್ನು ಬುಧವಾರ ಮಾಲೀಕ ಮತ್ತು ಅದರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ನಗರದ ನಾಗೇಂದ್ರನಮಟ್ಟಿಯಲ್ಲಿ ನಡೆದ ಜನ್ಮದಿನ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
ಸುತ್ತಲಿನ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳು ಪುಷ್ಪಮಾಲೆ ಮತ್ತು ಕೇಕ್ ತಂದಿದ್ದರು. ಹೋರಿಗೆ ಸೇವಂತಿ, ಚೆಂಡು, ಗುಲಾಬಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಸುಮಾರು 20 ಕೆಜಿ ತೂಕದ ಕೇಕ್ ಕೂಡ ಕತ್ತರಿಸಲಾಯಿತು. ಈ ಕುರಿತಂತೆ ಮಾತನಾಡಿದ ಹೋರಿ ಮಾಲೀಕ ಮಾರುತಿ, ಹೋರಿಯನ್ನು 20 ವರ್ಷಗಳ ಹಿಂದೆ ತಮಿಳುನಾಡಿನಿಂದ ತರಲಾಗಿದೆ. ತಮಿಳುನಾಡಿನಿಂದ ತಂದಾಗ ಸ್ಪರ್ಧೆಗೆ ಬಿಡಲಾಯಿತು. ಗಾಡಾ ಸ್ಪರ್ಧೆಯಲ್ಲಿ ಸಾಕಷ್ಟು ಹೆಸರು ಮಾಡಿದ ಕಾರಣ ಈ ಹೋರಿಗೆ ರಾಕಸ್ಟಾರ್ ಎಂದು ನಾಮಕರಣ ಮಾಡಿ ದನ ಬೆದರಿಸುವ ಸ್ಪರ್ಧೆಗೆ ಬಿಡಲಾಯಿತು ಎಂದರು.
ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದ ದನಬೆದರಿಸುವ ಸ್ಪರ್ಧೆಯಲ್ಲಿ ಈ ಹೋರಿ ಸಾಕಷ್ಟು ಹೆಸರು ಮಾಡಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹೊರ ರಾಜ್ಯವಾದ ತಮಿಳುನಾಡಿನಲ್ಲೂ ಸಹ ಇದು ತನ್ನ ವರಸೆ ತೋರಿಸಿ ಬಹುಮಾನಗಳನ್ನ ಗೆದ್ದುಕೊಂಡಿತ್ತು. ಹೋರಿಗೆ ಈಗ ವಯಸ್ಸಾಗಿರುವ ಕಾರಣ ಮಾಲೀಕ ಅದನ್ನ ಸ್ಪರ್ಧೆಗೆ ಬಿಡುತ್ತಿಲ್ಲ.