ಹಾವೇರಿ: ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ. ಅಷ್ಟೇ ಅಲ್ಲದೇ ನಿಯಮಿತ ದೂರಕ್ಕೆ ಈ ಮೊದಲು ಬಳಸಲಾಗುತ್ತಿದ್ದ ಇಂಧನಕ್ಕಿಂತ ಈಗ ಅತಿ ಹೆಚ್ಚು ಬೇಕಾಗುತ್ತಿದೆ. ಅಲ್ಲದೇ ಬಸ್‌ಗಳು ಪದೇ ಪದೆ ರಿಪೇರಿಗೆ ಬರುತ್ತಿದ್ದು, ಸಾರಿಗೆ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂ ಸವಣೂರು ವಿಭಾಗದಲ್ಲಂತೂ ಇನ್ನಿಲ್ಲದ ನಷ್ಟ ಅನುಭವಿಸುವಂತಾಗಿದೆ.
ಸವಣೂರು ಲಕ್ಷ್ಮೇಶ್ವರ, ಸವಣೂರು ಹೊಸರಿತ್ತಿ, ಸವಣೂರು ಇಚ್ಚಂಗಿ, ಸವಣೂರಿನಿಂದ ಸಂಚರಿಸುವ ಹಲವು ಮಾರ್ಗಗಳಲ್ಲಿ ರಸ್ತೆಗಳು ಹಾಳಾಗಿವೆ. ಹೀಗಾಗಿ ಸಾರಿಗೆ ಇಲಾಖೆ ಈ ಭಾಗಗಳಿಗೆ ಈಗ ಬಸ್‌ಗಳ ಒಡಾಟ ಕಡಿಮೆ ಮಾಡಿದೆ. ನಿತ್ಯ ಸಂಚರಿಸುವ ನಾಲ್ಕು ಸಂಚಾರಗಳಲ್ಲಿ ಎರಡು ಸಂಚಾರ ರದ್ದಾಗಿದೆ. ಮುಂಜಾನೆ ಮತ್ತು ಸಂಜೆ ಮಾತ್ರ ಎರಡು ಬಾರಿ ಬಸ್‌ಗಳು ಸಂಚರಿಸುತ್ತಿವೆ. ಇದರಿಂದ ಗ್ರಾಮಾಂತರ ಪ್ರದೇಶಗಳಿಂದ ಸವಣೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಉಂಟಾಗಿದೆ.