ಹಾವೇರಿ:ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ನವೆಂಬರ್ ತಿಂಗಳವರೆಗೆ ರಸ್ತೆ ಅಪಘಾತದಲ್ಲಿ 198 ಜನ ಅಸುನೀಗಿದ್ದಾರೆ. 461 ಮಂದಿ ಗಂಭೀರವಾಗಿ ಗಾಯಗೊಂಡರೆ, 677 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ರಸ್ತೆ ಅಪಘಾತಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ 7 ಅಪಘಾತ ವಲಯಗಳನ್ನು ಗುರುತಿಸಿದೆ. ಅದರಲ್ಲಿ 3 ಅಪಘಾತ ವಲಯಗಳು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿವೆ ಎಂದರು.
ಶಿಗ್ಗಾವಿ ತಾಲೂಕಿನ ತಡಸದ ಬಳಿಯ ತಿಮ್ಮಾಪುರ ಕ್ರಾಸ್, ಶಿಗ್ಗಾವಿ ಪಟ್ಟಣದ ಗಂಗಿಬಾವಿ ಕ್ರಾಸ್ ಮತ್ತು ಖುರ್ಸಾಪುರ್ ಕ್ರಾಸ್ಗಳಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸಿವೆ. ಅದರಂತೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿಂದ ಛತ್ರದವರೆಗಿನ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ರಾಣೆಬೆನ್ನೂರು ನಗರದಿಂದ ಹಲಗೇರಿ ಸಂಪರ್ಕಿಸುವ ರಸ್ತೆಯ ಕೆಳಸೇತುವೆ, ಮತ್ತು ಕುಮಾರಪಟ್ಟಣಂನ ಹಳೆಯ ಕರೂರು ಕ್ರಾಸ್ ಹಾಗೂ ಮಾಕನೂರು ಕ್ರಾಸಗಳನ್ನ ಪೊಲೀಸ್ ಇಲಾಖೆ ಅಪಘಾತ ವಲಯಗಳೆಂದು ಗುರುತಿಸಿದೆ ಎಂದು ಮಾಹಿತಿ ನೀಡಿದರು.
ಬ್ಯಾಡಗಿ ತಾಲೂಕಿನ ಛತ್ರದಿಂದ ಮೋಟೆಬೆನ್ನೂರು ಸಂಪರ್ಕಿಸುವ ರಸ್ತೆ ಮತ್ತು ಶಿಗ್ಗಾವಿಯಿಂದ ಖುರ್ಸಾಪುರ ಸಂಪರ್ಕಿಸುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿವೆ. ಇಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಕಾರಣ ಅಪಘಾತಗಳ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿನ ಛತ್ರ ಮತ್ತು ಮೋಟೆಬೆನ್ನೂರಲ್ಲಿ ಮೆಲ್ಸೇತುವೆ ಮತ್ತು ಸರ್ವಿಸ್ ರಸ್ತೆಗಳು ಸಮರ್ಪಕವಾಗಿಲ್ಲದ ಕಾರಣ ಅಧಿಕ ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತಂತೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿರುವುದಾಗಿ ಎಸ್ಪಿ ಹನುಮಂತರಾಯ ತಿಳಿಸಿದರು.