ಹಾವೇರಿ:ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ ಬಜೆಟ್ ಹಾವೇರಿ ಜಿಲ್ಲೆಗೆ ನಿರಾಶಾದಾಯಕ ಎಂದು ಹಾವೇರಿಯ ಚೆಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ರವಿ ಮೆಣಸಿನಕಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಜೆಟ್ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜನರು ಕಟ್ಟುವ ತೆರಿಗೆಯ ಬಹುಪಾಲನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ವೆಚ್ಚ ಮಾಡಲಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ಹೊರತುಪಡಿಸಿ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಕೈಗಾರಿಕೋದ್ಯಮಿಗಳು ಸಿಎಂ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಾಡಿದ್ವಿ. ಆದರೆ ಸಿಎಂ ಸಿದ್ದರಾಮಯ್ಯ ಬ್ರಾಂಡ್ ಬೆಂಗಳೂರು ಮಾಡಲು ಮುಂದಾಗಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಉತ್ತರ ಕರ್ನಾಟಕದ ಹಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ದಿ ಬಗ್ಗೆ ಒಲುವು ವ್ಯಕ್ತಪಡಿಸಿಲ್ಲ. ಹಾವೇರಿ ಜಿಲ್ಲೆಯ ಹೆಸ್ಕಾಂ ಹಾಕುವ ಇಂಧನ ತೆರಿಗೆಯನ್ನು ಶೇ.9 ರಿಂದ ಶೇ.3ಕ್ಕೆ ಇಳಿಸಿ ಎಂದು ಮನವಿ ಮಾಡಲಾಗಿತ್ತು. ಆದರೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಕೈಗಾರಿಕೆಗಳು ಇಲ್ಲ. ಜಿಲ್ಲಾ ಕೇಂದ್ರ ಹಾವೇರಿ ಸುತ್ತಮುತ್ತ ಕೈಗಾರಿಕಾ ಕಾರಿಡಾರ್ ನಿರ್ಮಿಸುವ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿಲ್ಲ ಆದಷ್ಟು ಬೇಗ ಇದನ್ನು ಮಾಡಬೇಕು. ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಬೇಕು ಎನ್ನುವುದು ಹಲವಾರು ವರ್ಷಗಳ ಬೇಡಿಕೆ. ಇದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಎರಡು ಎಕರೆ ಜಮೀನಿನಲ್ಲಿ ಯಾವುದೇ ಅನುಮತಿ ಇಲ್ಲದೇ ಎನ್ಎ ಮಾಡಿಸದೇ ಉದ್ಯಮ ಆರಂಭಿಸುವ ಯೋಜನೆ ಉತ್ತಮವಾಗಿದೆ. ಅಲ್ಲದೇ ಎಪಿಎಂಸಿ ತಿದ್ದುಪಡಿಯಿಂದ ವ್ಯಾಪಾರಿಗಳಿಗೆ, ದಲಾಲರಿಗೆ, ರೈತರಿಗೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು.