ರಾಣೆಬೆನ್ನೂರು:ಕಳೆದ ಎರಡು ವರ್ಷಗಳಿಂದ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಭರ್ತಿಯಾಗದೇ ಖಾಲಿ ಉಳಿದಿತ್ತು. ಇದೀಗ ನ.01ಕ್ಕೆ ಚುನಾವಣೆ ಮುಹೂರ್ತ ನಿಗದಿಯಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಗೌಪ್ಯತೆಯಿಂದ ಕೂಡಿದೆ.
ಸದ್ಯ ರಾಣೆಬೆನ್ನೂರ ನಗರಸಭಾ ಅಧಿಕಾರ ವಿಚಾರವಾಗಿ ಯಾವ ಪಕ್ಷಕ್ಕೆ ಸೀಟು, ಯಾವ ಪಕ್ಷ ವೋಟು ಎಂದು ನಾಡಿದ್ದು ನಡೆಯುವ ಚುನಾವಣೆಯಲ್ಲಿ ತಿಳಿಯಲಿದೆ. ನಗರಸಭೆ ಅಧಿಕಾರ ಹಿಡಿಯಲು ಶಾಸಕ ಅರುಣಕುಮಾರ ಪೂಜಾರ, ವಿಧಾನಪರಿಷತ್ ಸದಸ್ಯ ಆರ್.ಶಂಕರ ಸೇರಿ ಅಧಿಕಾರ ಹಿಡಿಯಬೇಕು ಎಂಬ ಹಠದಲ್ಲಿದ್ದಾರೆ. ಈ ನಡುವೆ ಕಾಂಗ್ರೆಸ್‍ನ ಮಾಜಿ ಶಾಸಕರಾದ ಕೆ.ಬಿ.ಕೋಳಿವಾಡ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲು ಶತಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಯಾರ ತೆಕ್ಕೆಗೆ ಅಧ್ಯಕ್ಷ ಕಿರೀಟ ಸಿಗುತ್ತದೆ ಎಂಬುದು ಕಾದು ನೋಡಬೇಕಿದೆ.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಅ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 35 ಸದಸ್ಯರ ಪೈಕಿ ಯಾವ ಪಕ್ಷಕ್ಕೂ ಸಹ ಬಹುಮತವಿಲ್ಲದೇ ಅತಂತ್ರ ಸ್ಥಿತಿಯಲ್ಲಿ ನಗರಸಭೆ ಸಿಲುಕಿದ್ದು ಮೈತ್ರಿ ರಾಜಕಾರಣ ಅನಿವಾರ್ಯವಾಗಿದೆ. ರಾಣೆಬೆನ್ನೂರು ನಗರಸಭೆ ಅಧ್ಯಕ್ಷ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ 09, ಬಿ.ಜೆ.ಪಿ 15, ಕೆಪಿಜೆಪಿ 10 ಹಾಗೂ 1 ಪಕ್ಷೇತರ ಸೇರಿ ಒಟ್ಟು 35 ಸದಸ್ಯರಿದ್ದಾರೆ.
ಸದ್ಯ ಬಿಜೆಪಿ ಅಧಿಕಾರ ಪಡೆಯಲು ಇನ್ನೂ 4 ಸದಸ್ಯರ ಕೊರತೆಯಿದ್ದು, ಸಂಸದರು ಹಾಗೂ ಶಾಸಕರಿಗೂ ತಲಾ ಒಂದು ಮತ ಚಲಾಯಿಸುವ ಅವಕಾಶವಿರುವ ಕಾರಣ ಬಿಜೆಪಿ ಬಲ 17ಕ್ಕೆ ಏರುತ್ತದೆ. ಅಲ್ಲದೇ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾದ ಸದಸ್ಯರೊಬ್ಬರು ಇತ್ತಿಚೆಗೆ ಬಿಜೆಪಿ ಸೇರಿದ್ದು, ಅವರ ಮತ ಬಿಜೆಪಿಗೆ ಎನ್ನಲಾಗಿದೆ ಮತ್ತು ಓರ್ವ ಪಕ್ಷೇತರ ಸಹ ಬಿಜೆಪಿಗೆ ಬೆಂಬಲ ನೀಡಿದರೆ ಮ್ಯಾಜಿಕ್ ನಂಬರ 19 ಆಗುತ್ತದೆ ಆಗ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ.
ಕೆಪಿಜೆಪಿ-ಕಾಂಗ್ರೆಸ್ ಕೂಡಬಹುದೇ?
ಸದ್ಯ ಕಾಂಗ್ರೆಸ್ 09 ಸದಸ್ಯರನ್ನು ಹೊಂದಿದ್ದು, ಕೆಪಿಜೆಪಿ 09 ಸದಸ್ಯರನ್ನು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಕನಸು ಕಂಡರು ಕಾಣಬಹುದು. ಆದರೆ ಕೆಪಿಜೆಪಿ ಪಕ್ಷದ ಸದಸ್ಯರು ಬಿಜೆಪಿ ಸೇರಿರುವ ಆರ್.ಶಂಕರ ಹಿಂಬಾಲಕರಾಗಿದ್ದು, ಮೈತ್ರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮೈತ್ರಿ ಮಾಡಿದರು ಸಹ ಅಧಿಕಾರ ಪಡೆಯುವುದಕ್ಕೆ ಇನ್ನೊಂದು ಮತ ಬೇಕಾಗುತ್ತದೆ.
ತೋಟದ ಮನೆಗಳಲ್ಲಿ ಗೌಪ್ಯ ಸಭೆ ರೆಸಾರ್ಟ್ ರಾಜಕಾರಣ:ಬಿಜೆಪಿ - ಕೆಪಿಜೆಪಿ ಸದಸ್ಯರು ಕಳೆದ ಎರಡು ದಿನಗಳಿಂದ ರೆಸಾರ್ಟ್ ರಾಜಕಾರಣ ಪ್ರಾರಂಭಿಸಿದ್ದಾರೆ. ಇತ್ತ ಕಾಂಗ್ರೆಸ್ ಸದಸ್ಯರು ಕೂಡ ಗೌಪ್ಯವಾಗಿ ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ರಾಣೆಬೆನ್ನೂರು ನಗರಸಭಾ ಅಧಿಕಾರ ಭಾಗ್ಯ ಯಾರಿಗೆ ಒಲಿಯುತ್ತದೆ ಎಂಬುದು ನ.1 ಕ್ಕೆ ತಿಳಿಯಲಿದೆ.