ಹಾವೇರಿ:ರಾಣೆಬೆನ್ನೂರು ವಿಧಾನಾಸಭೆ ಕ್ಷೇತ್ರಕ್ಕೆ ಅರುಣಕುಮಾರ್ ಪೂಜಾರಿಗೆ ಬಿಜೆಪಿ ಟಿಕೆಟ್ ಪ್ರಕಟವಾಗುತ್ತಿದ್ದಂತೆ ಮಾಜಿ ಸಚಿವ ಆರ್ ಶಂಕರ್ ತಮ್ಮ ವಿಧಾನಪರಿಷತ್ ಸದಸ್ಯತ್ವ ರಾಜೀನಾಮೆ ನೀಡಿದ್ದಾರೆ. ಇಂದು ಮಧ್ಯಾಹ್ನ ವಿಧಾನಸೌಧಕ್ಕೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಶಂಕರ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಶಂಕರ್ ಸಹ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ, ಈಗ ವಿಧಾನಸಭೆ ಚುನಾವಣೆಗೆ ರಾಣೆಬೆನ್ನೂರು ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಶಂಕರ್ ಅವರಿಗೆ ಮಣೆ ಹಾಕಲಿಲ್ಲ. ಹಾಲಿ ಶಾಸಕ ಅರುಣಕುಮಾರ್ ಪೂಜಾರಿ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡ ಅವರು ರಾಜೀನಾಮೆ ಹಾದಿ ಹಿಡಿದಿದ್ದಾರೆ.
2013ರಲ್ಲಿ ಶಂಕರ್ ರಾಣೆಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಬಿ. ಕೋಳಿವಾಡ್ ವಿರುದ್ಧ ಸೋಲುಂಡಿದ್ದರು. 2018ರಲ್ಲಿ ಪಕ್ಷೇತರ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. ನಂತರ ಸಚಿವ ಸ್ಥಾನದ ಅಕಾಂಕ್ಷಿಯಾಗಿದ್ದ ಶಂಕರ್ ಅರಣ್ಯ ಖಾತೆ ಸಚಿವರಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಪತನವಾದಾಗ ಮುಂಬೈಗೆ ಹೋಗಿದ್ದರು. ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದ ಅವರು ಅನರ್ಹ ಶಾಸಕರಾಗಿದ್ದರು. ಉಪ ಚುನಾವಣೆಯಲ್ಲಿ ಸೋಲುವ ಸಾಧ್ಯತೆ ಇರುವ ಕಾರಣ ಬಿಜೆಪಿ ಅರುಣಕುಮಾರಗೆ ಟಿಕೆಟ್ ನೀಡಿತ್ತು. ಇತ್ತ ಆರ್ ಶಂಕರ್ನ್ನು ಬಿಜೆಪಿ ಪರಿಷತ್ ಸದಸ್ಯನಾಗಿ ಮಾಡಿತ್ತು.
ಸಭಾಪತಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಶಂಕರ್, ''ನನಗೆ ಯಾರ ಮೇಲೂ ಸಿಟ್ಟಿಲ್ಲ. ನನ್ನ ಮೇಲೆಯೇ ನನಗೆ ಸಿಟ್ಟಿದೆ. ಒಳ್ಳೆಯದು ಮಾಡಲು ಹೋಗಿ ನನಗೆ ಈ ಪರಿಸ್ಥಿತಿ ಬಂದಿದೆ'' ಎಂದು ನೊಂದು ಹೇಳಿದರು. ''ನಾನು ದುಡುಕಿ ಅವರು ಹೇಳಿದ್ದೆಲ್ಲ ಕೇಳಿದೆ. ನಾನು ಎಂಎಲ್ಸಿ ಆಗಿಯೇ ಇರಬಹುದಿತ್ತು. ಕಾರ್ಯಕರ್ತರ ಒತ್ತಡ ಹಾಗೂ ಜನರ ಮಾತನ್ನು ಕೇಳಿ ರಾಜೀನಾಮೆ ನೀಡಿದ್ದೇನೆ. ಸ್ಪರ್ಧೆ ಮಾಡುವುದಂತೂ ಖಚಿತ. ಆದರೆ, ಯಾವ ಪಕ್ಷದಿಂದ ಅಂತ ಎರಡು ದಿನದಲ್ಲಿ ನಿರ್ಧಾರ ಮಾಡುತ್ತೇನೆ. ನನಗೆ ಗೆಲ್ಲುವ ವಿಶ್ವಾಸವಿದೆ. ಹೀಗಾಗಿಯೇ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ'' ಎಂದರು. ''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡೇ ಇಲ್ಲ. ಅವರು ಮಾತನಾಡಿದ್ದರೆ, ಏನಾದರೂ ಆಗುತ್ತಿತ್ತು. ಈಗ ರಾಜೀನಾಮೆ ಕೊಟ್ಟಾಗಿದೆ'' ಎಂದು ಹೇಳಿದರು.