ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾವಿನತೋಪು ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಕಮಿಟಿಯು ರಾಜ್ಯಮಟ್ಟದ ಟಗರಿನ ಕಾಳಗ ಸ್ಪರ್ಧೆ ಆಯೋಜಿಸಿತ್ತು. ಈ ಕಾಳಗಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದಾರೆ.
ದಾವಣಗೆರೆ, ಶಿವಮೊಗ್ಗ, ಗದಗ, ಶಿರಸಿ ಮತ್ತು ಧಾರವಾಡ ಜಿಲ್ಲೆಯಿಂದ ಇನ್ನೂರಕ್ಕೂ ಅಧಿಕ ಟಗರುಗಳೊಂದಿಗೆ ಮಾಲೀಕರು ಸ್ಪರ್ಧೆಗೆ ಆಗಮಿಸಿದ್ದರು. ತಾವು ಸಾಕಿದ ತಮ್ಮ ನೆಚ್ಚಿನ ಟಗರಿಗೆ ವಿಶೇಷ ಹೆಸರಿಟ್ಟು ಸ್ಪರ್ಧೆಯಲ್ಲಿ ಕಾಳಗಕ್ಕೆ ಬಿಟ್ಟಿದ್ದರು. ಎರಡು ಟಗರುಗಳು ದೂರದಿಂದ ಓಡಿ ಬಂದು ಡಿಕ್ಕಿ ಹೊಡೆಯುವ ದೃಶ್ಯ ಮೈನವಿರೇಳಿಸುವಂತಿತ್ತು. ಹಾಲು ಹಲ್ಲು, ಆರು ಹಲ್ಲು, ನಾಲ್ಕು ಹಲ್ಲು ಮತ್ತು ಎರಡು ಹಲ್ಲು ಎಂಬ ನಾಲ್ಕು ವಿಭಾಗದಲ್ಲಿ ಈ ಟಗರು ಕಾಳಗವನ್ನು ಆಯೋಜಿಸಲಾಗಿತ್ತು.