ಹಾವೇರಿಯಲ್ಲಿ ರಾಜ್ಯೋತ್ಸವ ಸಂಭ್ರಮ ಹಾವೇರಿ: 68ನೇ ಕರ್ನಾಟಕ ರಾಜ್ಯೋತ್ಸವವನ್ನು ಹಾವೇರಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೆರವೇರಿಸಿದರು.
ಧ್ವಜಾರೋಹಣದ ಮುನ್ನ ತಾಯಿ ಭುನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸಚಿವರು ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಇಲಾಖೆ ಹಾಗೂ ಶಾಲಾ ವಿದ್ಯಾರ್ಥಿಗಳಿಗಳ ಆಕರ್ಷಕ ಪಂಥಸಂಚಲನ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ 68 ನೇ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು. ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಕನ್ನಡ ನಾಡು ನುಡಿಗೆ ಶ್ರಮಿಸಿದ ಗಣ್ಯರನ್ನು ಸ್ಮರಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದಮೂರ್ತಿ, ಎಸ್ಪಿ ಡಾ.ಶಿವಕುಮಾರ ಸೇರಿದಂತೆ ಗಣ್ಯರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಿರುಕನ ಕನಸು ಕಾಣುತ್ತಿದ್ದಾರೆ ರಮೇಶ ಜಾರಕಿಹೊಳಿ:ರಾಜ್ಯ ಸರ್ಕಾರ ಪತನದ ಕುರಿತಾಗಿ ರಮೇಶ ಜಾರಕಿಹೊಳಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ರಮೇಶ ಜಾರಕಿಹೊಳಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಬೀಳುತ್ತೆ ಎಂದು ಹೇಳುತ್ತಿದ್ದಾರೆ. ಅವರು ಯಾವತ್ತಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಅವರು ಇನ್ನೂ ಎಷ್ಟು ವರ್ಷ ಹೇಳಬೇಕು ಎಂದು ಪಾಟೀಲ್ ಪ್ರಶ್ನಿಸಿದರು.
ಬಿಜೆಪಿಯವರಿಗೆ ಹೇಳಿಕೊಳ್ಳಲು ಈಗ ಏನೂ ಇಲ್ಲ ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರ ಆಡಳಿತಾವಧಿ ಐದು ವರ್ಷ ಪೂರೈಸುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಶಿವಾನಂದ ಪಾಟೀಲ್, ಬಿಜೆಪಿಯವರು ಕಳೆದ ಸಲ ಅತಿವೃಷ್ಟಿಯಾದಾಗ ಕೇಂದ್ರ ಸರ್ಕಾರದ ಪರಿಹಾರ ಬರುವ ಮೊದಲು ರೈತರಿಗೆ ಪರಿಹಾರ ನೀಡಿದ್ದೆವು ಎನ್ನುತ್ತಾರೆ. ಆ ರೀತಿ ನೀಡಿದ್ದರ ಬಗ್ಗೆ ಸಾಕ್ಷ್ಯಗಳನ್ನು ನೀಡಲಿ ಎಂದು ಸಚಿವ ಪಾಟೀಲ್ ಒತ್ತಾಯಿಸಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಯುವಿಕೆ ಆರಂಭವಾದ ಮೇಲೆ ದರ ಸಿಗುತ್ತೆ. ಈ ವರ್ಷ ಅಧಿಕ ಬೇಡಿಕೆ ಇರುವುದರಿಂದ ರೈತರ ಕಬ್ಬಿಗೆ ಈ ಬಾರಿ ಹೆಚ್ಚು ದರ ಸಿಗುತ್ತೆ. ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಮಾಡಿದರೆ ರೈತರಿಗೆ ಅಧಿಕ ದರ ಸಿಗಲಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರದಿಂದ ಹೆಚ್ಚು ಬೆಳೆವಿಮೆ ಹಾವೇರಿಗೆ ಬಿಡುಗಡೆಯಾಗಿದೆ. ಹಾವೇರಿ ಜಿಲ್ಲೆಗೆ 166 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಜಿಲ್ಲಾಧಿಕಾರಿ ಖಾತೆಗೆ ಜಮಾ ಆಗಿದೆ. ಆದಷ್ಟು ಬೇಗ ಬೆಳೆವಿಮೆಯ ಪ್ರತಿಶತ 25 ರಷ್ಟು ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದು ಸಚಿವ ಶಿವಾನಂದ ಪಾಟೀಲ್ ಮಾಹಿತಿ ನೀಡಿದರು.
ಹಾವೇರಿ ಸಮೀಪದ ಆಲದಕಟ್ಟೆ ಪಟಾಕಿ ದುರಂತದ ಕುರಿತಂತೆ ಆವಾಗಲೇ ರಾಜ್ಯ ಸರ್ಕಾರಕ್ಕೆ ನಾನು ಪತ್ರ ಬರೆದಿದ್ದೆ. ಹಾವೇರಿ ಪಟಾಕಿ ದುರಂತ ಕುರಿತ ತನಿಖೆ ಆರಂಭವಾಗಿದೆ. ವರದಿ ಬಂದ ನಂತರ ಪ್ರಕಟಿಸಲಾಗುವುದು. ಪಟಾಕಿ ದುರಂತದಲ್ಲಿ ಜೀವ ಕಳೆದುಕೊಂಡವರ ಸಂಬಂಧಿಕರಿಗೆ ಪರಿಹಾರ ಹಣ ನೀಡಿದ್ದೇವೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಇದನ್ನೂಓದಿ:ರಾಜ್ಯೋತ್ಸವ: ಧಾರವಾಡದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಂತೋಷ್ ಲಾಡ್