ಕರ್ನಾಟಕ

karnataka

ETV Bharat / state

ತುಮಕೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಧಾರಾಕಾರ ಮಳೆ... ಜನರ ಪರದಾಟ - ದಾವಣಗೆರೆ

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಗಳಾದ ಹಾವೇರಿ, ದಾವಣಗೆರೆ, ತುಮಕೂರಿನಲ್ಲಿ ಧಾರಾಕಾರ ಮಳೆಯಿಂದ ಜನರು ಪರದಾಡಿದ್ದಾರೆ.

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ
ರಾಜ್ಯದ ವಿವಿಧೆಡೆ ಧಾರಾಕಾರ ಮಳೆ

By ETV Bharat Karnataka Team

Published : Nov 6, 2023, 8:55 PM IST

Updated : Nov 6, 2023, 10:22 PM IST

ಹಾವೇರಿಯಲ್ಲಿ ಸುರಿದ ಮಳೆಯ ದೃಶ್ಯ

ಹಾವೇರಿ:ಸೋಮವಾರ ಸಂಜೆ ಹಾವೇರಿ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನಿಧಾನವಾಗಿ ಆರಂಭವಾದ ಮಳೆ ನಂತರ ತೀವ್ರತೆ ಪಡೆಯಿತು. ಸುಮಾರು ಗಂಟೆಗೂ ಅಧಿಕ ಕಾಲ ಸುರಿದ ಮಳೆರಾಯನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಮಳೆಯ ರಭಸಕ್ಕೆ ಚರಂಡಿಗಳೆಲ್ಲ ತುಂಬಿ ಚರಂಡಿಯ ನೀರು ತ್ಯಾಜ್ಯ ರಸ್ತೆಗಳ ಮೇಲೆ ಬಂದು ನಿಂತಿತು. ರೈಲು ನಿಲ್ದಾಣದ ಬಳಿ ಇರುವ ಅಂಡರ್​​ ಬ್ರಿಡ್ಜ್‌ನಲ್ಲಿ ಮಳೆ ನೀರು ನಿಂತು ಕೆಲಕಾಲ ರಸ್ತೆ ಸಂಚಾರ ಸಹ ಸ್ಥಗಿತವಾಗಿತ್ತು.

ವಾಹನ ಸವಾರರು ಮೇಲ್ಸೇತುವೆ ಮೂಲಕ ಸಂಚರಿಸಿದರು. ಜುಲೈನಲ್ಲಿ ಸುರಿದ ಮಳೆಯ ನಂತ ನವಂಬರ್ ತಿಂಗಳಲ್ಲಿ ಅದು ಸೋಮವಾರ ಅತ್ಯಧಿಕ ಮಳೆಯಾಗಿದೆ. ಗುಡುಗು ಸಿಡಿಲು ಸಹಿತ ಆರಂಭವಾದ ಮಳೆ ನಂತರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕಳೆದ ಕೆಲ ತಿಂಗಳು ಮಳೆಯಿಲ್ಲದೇ ಕಂಗೆಟ್ಟಿದ್ದ ರೈತರಿಗೆ ಮಳೆರಾಯನ ಆರ್ಭಟ ಸಂತಸ ನೀಡಿತು. ಈ ಮಧ್ಯೆ ಹಿಂಗಾರು ಬಿತ್ತನೆಗೆ ಉತ್ತಮ ಮಳೆಯಾಗಿದೆ ಎಂದು ರೈತರು ಅಭಿಪ್ರಾಯಪಟ್ಟರು. ಇದೇ ವೇಳೆ, ಮುಂಗಾರು ಮಳೆಯಲ್ಲಿ ಅಲ್ಪಸ್ವಲ್ಪ ಮೆಕ್ಕೆಜೋಳ ಮತ್ತು ಶೇಂಗಾ ಬೆಳೆಗಳ ಫಸಲಿಗೆ ಸೋಮವಾರದ ಮಳೆ ಹಾನಿಯನ್ನುಂಟು ಮಾಡಿದೆ.

ದಾವಣಗೆರೆಯಲ್ಲಿ ಸುರಿದ ಮಳೆಯ ದೃಶ್ಯ

ದಾವಣಗೆರೆಯಲ್ಲಿ ಮಳೆಗೆ ಅರ್ಧ ಭಾಗ ಮುಳುಗಿದ ಕಾರುಗಳು, ತೇಲಾಡಿದ ಬೈಕ್​ಗಳು:ಮಳೆ ಇಲ್ಲದೇ ಬಿಸಿಲಿನಿಂದ ರೋಸಿಹೋಗಿದ್ದ ಜನರಿಗೆ ಇಂದು ಸಂಜೆ ಮಳೆರಾಯರ ತಂಪೆರೆದಿದ್ದಾನೆ. ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಸಂಜೆ ಶುರುವಾದ ಧಾರಾಕಾರ ಮಳೆಗೆ ಚನ್ನಗಿರಿ ಪಟ್ಟಣದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.

ಪಟ್ಟಣದ ರಸ್ತೆಗಳು ನೀರಿನಿಂದ ತುಂಬಿದ್ದು, ವಾಹನ ಸವಾರರಿಗೆ ಕಿರಿಕಿರಿ ಆಯಿತು. ಮಳೆ ಇಲ್ಲದೇ ಕಂಗೆಟ್ಟಿದ್ದ ಚನ್ನಗಿರಿಗೆ ವರುಣ ತಂಪರೆದಿದ್ದರಿಂದ ಕೆಲವರು ಸಂತಸ ವ್ಯಕ್ತಪಡಿಸಿದರೆ, ಚನ್ನಗಿರಿ ಅಡಕೆ ಬೆಳೆಗಾರರು ಹಾಗು ರೈತರು ಮಾತ್ರ ಸರಿಯಾದ ಸಮಯಕ್ಕೆ ಮಳೆ ಬಾರದ್ದಕ್ಕೆ ಮಳೆಗೆ ಹಿಡಿಶಾಪ ಹಾಕಿದರು.

ಇನ್ನು ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಚನ್ನಗಿರಿ ಪಟ್ಟಣದ ಕೃಷಿ ಇಲಾಖೆಯ ಕಚೇರಿಯ ಆವರಣಕ್ಕೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡಚಣೆಯಾಗಿತ್ತು. ಇದಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಅರ್ಧ ಭಾಗ ಮುಳುಗಿ ಹೋಗಿ, ದ್ವಿಚಕ್ರವಾಹನಗಳು ನೀರಿನಲ್ಲಿ ತೇಲಾಡ್ತಿದ್ದವು. ಚನ್ನಗಿರಿಯಲ್ಲಿ ಭರ್ಜರಿ ಮಳೆಯಾಗಿದ್ದರಿಂದ ಸರಾಗವಾಗಿ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನೀರು ನಿಂತಿದ್ದು, ಪಾದಚಾರಿಗಳಿಗೆ ತೊಂದರೆಯಾಯಿತು.

ತುಮಕೂರಲ್ಲಿ ಸುರಿದ ಮಳೆಯ ದೃಶ್ಯ

ತುಮಕೂರು ನಗರದಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ:ನಗರದಲ್ಲಿ ಸಂಜೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರಿನಿಂದ ಜನರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ನಗರದ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯ ಅಂಡರ್​ಪಾಸ್​​ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಜತೆಗೆ ಮಳೆಯ ಪರಿಣಾಮ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಸಾರ್ವಜನಿಕರು ಕಾದು ಕಾದು ಸುಸ್ತಾದರು.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮಳೆ ರಗಳೆ: ಜಲಾವೃತಗೊಂಡ ರಸ್ತೆಗಳು.. ಪಾಲಿಕೆ ವಿರುದ್ದ ಸಾರ್ವಜನಿಕರ ಹಿಡಿಶಾಪ

Last Updated : Nov 6, 2023, 10:22 PM IST

ABOUT THE AUTHOR

...view details