ಹಾವೇರಿ: ರಾಜ್ಯಾದ್ಯಂತ ಮಳೆ ಕೊರತೆ ಕಾಡುತ್ತಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಳೆಯು ಕೈಕೊಟ್ಟಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲೂ ಮಳೆ ಕೊರೆತೆ ಎದುರಾಗಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿತ್ತು.
ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಶೇ. 97ರಷ್ಟು ಬಿತ್ತನೆ ಕಾರ್ಯ ಆಗಿದೆ. ರಾಜ್ಯದಲ್ಲಿ ಅತಿಹೆಚ್ಚು ಬಿತ್ತನೆ ನಡೆದಿರುವ ಜಿಲ್ಲೆ ಹಾವೇರಿಯಾಗಿದೆ. ಸದ್ಯ ಬೆಳೆಗಳು ಉತ್ತಮ ಇಳುವರಿ ನೀಡುವ ಹಂತಕ್ಕೆ ಬಂದು ತಲುಪಿದ್ದು, ಕಳೆದ ಕೆಲವು ದಿನಗಳಿಂದ ಮಳೆ ಮರೆಯಾಗಿದೆ. ಜಮೀನಿನಲ್ಲಿ ಬೆಳೆದ ಬೆಳೆಗಳು ಬೆಳೆಗಳು ಒಣಗಲು ಆರಂಭಿಸಿವೆ. ಇದರಿಂದಾಗಿ ಏನು ಮಾಡಬೇಕೆಂದು ತೋಚದೆ ರೈತರು ಚಿಂತಿತರಾಗಿದ್ದಾರೆ. ಕೆಲವರು ಜಮೀನಿನಲ್ಲಿನ ಒಣಗಿದ ಬೆಳೆಗಳನ್ನು ನಾಶ ಮಾಡಿ ಹಿಂಗಾರು ಮಳೆಗೆ ಭೂಮಿಯಲ್ಲಿ ಹೊಸ ಬಿತ್ತನೆ ಮಾಡಲು ಮುಂದಾಗುತ್ತಿದ್ದಾರೆ.
ಜಿಲ್ಲೆಯಲ್ಲಿ ರೈತರು ಬೆಳೆದ ಶೇಂಗಾ, ಭತ್ತ, ಮೆಕ್ಕೆಜೋಳ, ಮೆಣಸಿನಕಾಯಿ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಮಳೆಯಿಲ್ಲದೆ ನಾಶವಾಗಿವೆ. ಜಿಲ್ಲೆಗೆ ಹೊಸದಾಗಿ ಕಾಲಿಟ್ಟಿರುವ ಡ್ರಾಗನ್ ಫ್ರೂಟ್ಸ್ ಬೆಳೆಯೂ ಕೂಡ ಮುಂಗಾರು ಮಳೆಯ ಕೊರತೆಯಿಂದ ಹಾಳಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಗಿಡದಲ್ಲಿ ಹೂಗಳೇ ಅರಳುತ್ತಿಲ್ಲ ಎಂದು ಡ್ರಾಗನ್ ಫ್ರೂಟ್ಸ್ ಬೆಳೆದ ರೈತ ಬಸಾಪುರದ ಯಲ್ಲಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.