ಕರ್ನಾಟಕ

karnataka

ETV Bharat / state

ಹಾವೇರಿ: ಸಂಭ್ರಮದಿಂದ ನೆರವೇರಿದ ರಾಘವೇಂದ್ರಸ್ವಾಮಿಗಳ ರಥೋತ್ಸವ - ಈಟಿವಿ ಭಾರತ ಕರ್ನಾಟಕ

ಹಾವೇರಿ ನಗರದಲ್ಲಿ ಉತ್ತರಾಧನೆಯ ಅಂಗವಾಗಿ ರಾಘವೇಂದ್ರಸ್ವಾಮಿಗಳ ರಥೋತ್ಸವ ನಡೆಯಿತು.

raghavendraswamy-rathotsava-held-in-havri
ಹಾವೇರಿ: ಸಂಭ್ರಮದಿಂದ ನರವೇರಿದ ರಾಘವೇಂದ್ರಸ್ವಾಮಿಗಳ ರಥೋತ್ಸವ

By ETV Bharat Karnataka Team

Published : Sep 2, 2023, 8:27 PM IST

Updated : Sep 2, 2023, 10:52 PM IST

ಹಾವೇರಿಯಲ್ಲಿ ಸಂಭ್ರಮದಿಂದ ನೆರವೇರಿದ ರಾಘವೇಂದ್ರಸ್ವಾಮಿಗಳ ರಥೋತ್ಸವ

ಹಾವೇರಿ:ನಗರದ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ ಆಚರಿಸಲಾಯಿತು. ಗುರುವಾರ ಪೂರ್ವಾರಾಧನೆ, ಶುಕ್ರವಾರ ಮಧ್ಯಾರಾದನೆ, ಬೆಳ್ಳಿರಥೋತ್ಸವ ಮತ್ತು ಶನಿವಾರ ಉತ್ತರಾಧನೆ ಜರುಗಿತು. ಉತ್ತರಾಧನೆಯ ಅಂಗವಾಗಿ ರಾಘವೇಂದ್ರಸ್ವಾಮಿಗಳ ರಥೋತ್ಸವ ಸಂಭ್ರಮದಿಂದ ನೆರವೇರಿತು. ನಗರದ ಅಗ್ರಹಾರದ ಆಶ್ವತ್ಥ ವೃಕ್ಷದಿಂದ ಆರಂಭವಾದ ರಥೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ, ನಂತರ ತೇರುಬೀದಿ ಆಂಜನೇಯ ದೇವಸ್ಥಾನಕ್ಕೆ ರಥೋತ್ಸವ ಆಗಮಿಸಿತು. ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಹರಿಕೃಷ್ಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಅಲ್ಲಿಂದ ತೇರುಬೀದಿ ಆಂಜನೇಯ ದೇವಸ್ಥಾನದಿಂದ ರಥೋತ್ಸವ ರಾಘವೇಂದ್ರಸ್ವಾಮಿ ಮಠದವರೆಗೆ ಸಾಗಿ ಬಂದಿತು. ರಥೋತ್ಸವಕ್ಕೆ ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿತು. ಮಠಕ್ಕೆ ರಥೋತ್ಸವ ಆಗಮಿಸುತ್ತಿದ್ದಂತೆ ರಾಘವೇಂದ್ರಸ್ವಾಮಿಗಳ ಬೆಳ್ಳಿ ಮೂರ್ತಿಯನ್ನು ರಥೋತ್ಸವಕ್ಕೆ ಪ್ರದಕ್ಷಿಣಿ ಹಾಕಿಸಲಾಯಿತು. ನಂತರ ಧಾರ್ಮಿಕ ವಿಧಾನಗಳನ್ನು ಪೂರೈಸಿ ಮಠದ ವೃಂದಾನವನಕ್ಕೆ ಕರೆತರಲಾಯಿತು.

ರಾಘವೇಂದ್ರಮಠದ ಧರ್ಮದರ್ಶಿ ಹರಿಕೃಷ್ಣ ಮಾತನಾಡಿ, ರಾಘವೇಂದ್ರ ಸ್ವಾಮಿಗಳ ಆರಾಧನೆ ಬಹಳ ವಿಜೃಂಭಣೆಯಿಂದ ನರವೇರಿದೆ. 314 ವರ್ಷದಷ್ಟು ಹಳೆಯ ವೃಂದಾವನ ಇದಾಗಿದೆ. ಎಲ್ಲ ಕಡೆ ಮೃತ್ತಿಕಾ ವೃಂದಾವನವಿದ್ದರೆ ಇಲ್ಲಿ ಸ್ವಯಂಭೂತ ವೃಂದಾವನವಿದೆ. ಸ್ವತಃ ರಾಘವೇಂದ್ರ ಸ್ವಾಮಿಗಳೇ ಸ್ವಪ್ನದಲ್ಲಿ ಬಂದು ರಾಮ ದೇವರು ಮುಟ್ಟಿದ ಶಿಲೆಯಿಂದ ಆಂಜನೇಯನ ಮೂರ್ತಿ ಪ್ರತಿಷ್ಠಾಪಿಸಿಕೊಂಡು. ಆಮೇಲೆ ವೃಂದಾವನ ಮಾಡಿಸಿಕೊಂಡ ಅದ್ಬುತ ದಿವ್ಯ ಸಾನಿಧ್ಯ ಎಂದರು.

ರಾಘವೇಂದ್ರ ಸ್ವಾಮಿಗಳು ನಿರಂತರವಾಗಿ ಪ್ರಾಥಃಕಾಲದಲ್ಲಿ ಎಲ್ಲರಿಗೂ ಗೋಚರವಾಗುವ ರೀತಿಯಾಗಿ 3 ಗಂಟೆಯಿಂದ 5 ಗಂಟೆಯ ಕಾಲದಲ್ಲಿ ಅವರ ಅನುಷ್ಠಾನಗಳನ್ನು ಮಾಡುವುದು, ಗಂಟೆ ಶಬ್ದ ಬರುವುದು ಮಠದಲ್ಲಿ ಈಗಲೂ ನಡೆಯುತ್ತಿದೆ. ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯ ನಡೆಯುವಾಗ ರಾಘವೇಂದ್ರಸ್ವಾಮಿಗಳು ಭಕ್ತರಿಗೆ ದರ್ಶನ ನೀಡಿ ಅವರ ಕಷ್ಟಗಳನ್ನು ನಿವಾರಿಸಿದ್ದಾರೆ ಎಂದು ಹೇಳಿದರು.

ಹಾವೇರಿಯ ಚಿಕ್ಕೂಬಾಯಿ ಎಂಬ ಭಕ್ತೆ ರಾಯರು ರಾಮನ ಪೂಜೆ ಮಾಡುವಾಗ ಅವರಿಗೆ ತುಳಸಿ, ಪುಷ್ಪ ಸೇರಿದಂತೆ ವಿವಿಧ ಪೂಜೆಯ ವಸ್ತುಗಳನ್ನು ನೀಡಿ ಪೂಜೆಗೆ ಸಹಕರಿಸುತ್ತಿದ್ದರು. ರಾಯರು ವೃಂದಾವನಸ್ಥರಾದ ಮೇಲೆ ಪ್ರತಿವರ್ಷ ಚಿಕ್ಕೂಬಾಯಿ ಮಂತ್ರಾಲಯಕ್ಕೆ ತೆರಳಿ ರಾಯರ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಚಿಕ್ಕೂಬಾಯಿ ವಯಸ್ಸಾದಂತೆ ಮಂತ್ರಾಲಯಕ್ಕೆ ಹೋಗಲು ಸಾಧ್ಯವಿಲ್ಲದಂತಾಯಿತು.

ಈ ಸಂದರ್ಭದಲ್ಲಿ ಸ್ವಪ್ನದಲ್ಲಿ ಕಾಣಿಸಿಕೊಂಡ ರಾಘವೇಂದ್ರ ಸ್ವಾಮಿಗಳು ಸಾರ್ವಭೌಮರು ಹಾವೇರಿಯಲ್ಲಿನ ಅಗ್ರಹಾರ ರಸ್ತೆಯ ಅಶ್ವತ್ಥ ವೃಕ್ಷದ ಕೆಳಗೆ ತಮ್ಮ ಫಲಮಂತ್ರಾಕ್ಷತೆ ಇದೆ ಎಂದು ತಿಳಿಸಿದ್ದರಂತೆ. ಈ ಸ್ಥಳದಲ್ಲಿ ವೃಂದಾವನ ನಿರ್ಮಿಸಿ ಪೂಜೆಸುವಂತೆ ತಿಳಿಸಿದ್ದರಂತೆ. ಅದರಂತೆ ಹಾವೇರಿಯಲ್ಲಿ ವೃಂದಾವನ ನಿರ್ಮಾಣವಾಗಿದೆ. ಮಂತ್ರಾಲಯದಲ್ಲಿರುವುದು ರಾಯರು ಸಜೀವ ವೃಂದಾನವಸ್ಥರಾದ ವೃಂದಾವನ. ಅದನ್ನ ಬಿಟ್ಟರೆ ಎರಡನೆಯದ್ದು ಬಿಚ್ಚಾಲೆಯಲ್ಲಿರುವುದು ಏಕಶಿಲಾ ವೃಂದಾವನ. ನಂತರ ನಿರ್ಮಾಣವಾಗಿದ್ದು ಹಾವೇರಿ ಮತ್ತು ಹೊನ್ನಳ್ಳಿಯ ವೃಂದಾವನ. ಹಲವು ದಾಸರು ಈ ಮಠದಲ್ಲಿದ್ದು ಹಲವು ಕೀರ್ತನೆಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಅದ್ಧೂರಿಯಾಗಿ ನೆರವೇರಿದ ಶ್ರೀರಾಘವೇಂದ್ರ ಸ್ವಾಮಿ ಮಹಾರಥೋತ್ಸವ.. ಸಾವಿರಾರು ಭಕ್ತರು ಭಾಗಿ

Last Updated : Sep 2, 2023, 10:52 PM IST

ABOUT THE AUTHOR

...view details