ಕರ್ನಾಟಕ

karnataka

By

Published : Feb 18, 2023, 8:35 AM IST

Updated : Feb 18, 2023, 1:57 PM IST

ETV Bharat / state

ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ ಚೀಟಿಗೆ ಕ್ಯೂ ನಿಲ್ಲಬೇಕಾ?: ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿ ಟೋಕನ್​ ಪಡೆಯಿರಿ

ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ಇನ್ನೂ ತ್ವರಿತವಾಗಿ ಸಿಗುವಂತೆ ಮಾಡಲು ಸರ್ಕಾರದಿಂದ ಹೊಸ ಯೋಜನೆ.

Scan QR code and get token
ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿ ಟೋಕನ್​ ಪಡೆಯಿರಿ

ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿ ಟೋಕನ್​ ಪಡೆಯಿರಿ

ಹಾವೇರಿ:ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿ ವಿಭಾಗಕ್ಕೆ ಒಪಿಡಿ ಚೀಟಿ ಮಾಡಿಸಿಕೊಳ್ಳಲು ಅಷ್ಟೇ ಅಲ್ಲ ಚೀಟಿ ಮಾಡಿಸಿದ ನಂತರ ವೈದ್ಯರ ಮುಂದೆ ಪರೀಕ್ಷೆಗಾಗಿಯೂ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಾಯುವ ಸಮಸ್ಯೆಗೆ ಸರ್ಕಾರ ಹೊಸದೊಂದು ಯೋಜನೆ ಮೂಲಕ ಪರಿಹಾರ ನೀಡಿದೆ. ಕರ್ನಾಟಕ ಸರ್ಕಾರದ ಆಯುಷ್ಮಾನ್​ ಭಾರತ ಡಿಜಿಟಲ್ ಮಿಷನ್ ವತಿಯಿಂದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಇ ಹಾಸ್ಪಿಟಿಲ್ ಸಹಯೋಗದಲ್ಲಿ ಅಭಾ(ಆಯುಷ್ಮಾನ್​ ಭಾರತ ಹೆಲ್ತ್​ ಅಕೌಂಟ್​) ತೆರೆಯುವ ಸೌಲಭ್ಯವನ್ನು ಕಲ್ಪಿಸಿದೆ.

ಹಾವೇರಿ ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ ಐದು ನೂರಕ್ಕೂ ಅಧಿಕ ರೋಗಿಗಳು ಆಗಮಿಸುತ್ತಾರೆ. ಅದರಲ್ಲಿ ಪ್ರತಿಶತ 90ರಷ್ಟು ಜನ ಹೊರರೋಗಿಗಳ ವಿಭಾಗದಲ್ಲಿ ವೈದ್ಯಕೀಯ ಸೇವೆ ಪಡೆಯುತ್ತಾರೆ. ಈ ರೀತಿ ಬಂದವರಿಗೆ ಓಪಿಡಿ ಚೀಟಿ ಮಾಡಿ ಕೊಡುವುದು ಜಿಲ್ಲಾಸ್ಪತ್ರೆಯ ಸಿಬ್ಬಂದಿಗೆ ದೊಡ್ಡ ಸಮಸ್ಯೆ. ರೋಗಿಗಳು ಅಥವಾ ರೋಗಿಗಳ ಸಂಬಂಧಿಕರು ಸರತಿಯಲ್ಲಿ ಓಪಿಡಿ ಚೀಟಿ ಪಡೆಯಲು ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಅದರಲ್ಲೂ ಸಾಮಾನ್ಯ ರೋಗಗಳನ್ನು ತೋರಿಸಿಕೊಳ್ಳಲು ರೋಗಿಗಳು ಚೀಟಿ ಮಾಡಿಸಲು ಅಷ್ಟೇ ಅಲ್ಲದೆ ವೈದ್ಯರ ಮುಂದೆ ಸಹ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕು. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಅದುವೇ ಜಿಲ್ಲಾಸ್ಪತ್ರೆಯಲ್ಲಿ ಆಯುಷ್ಮಾನ್​ ಭಾರತ ಹೆಲ್ತ್ ಅಕೌಂಟ್​ ತೆರೆಯುವ ಯೋಜನೆ.

ಏನಿದು ಹೊಸ ಯೋಜನೆ?: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅಭಾ ಅಂದರೆ ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ ತೆರೆಯಬಹುದಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಇದೀಗ ಪಾಸ್ಟ್ ಟ್ರ್ಯಾಕ್ ಕೌಂಟರ್ ಓಪನ್ ಮಾಡಲಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ಸ್ಮಾರ್ಟ್​ಫೋನ್ ತಂದರೆ ಸಾಕು. ಮೊಬೈಲ್ ಪ್ಲೇಸ್ಟೋರ್‌ನಲ್ಲಿ ಇಕಾ ಕೇರ್ ಅಥವಾ ಅಭಾ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಜನ್ಮದಿನಾಂಕ, ಲಿಂಗ, ವಿಳಾಸ ಸೇರಿದಂತೆ ವಿವಿಧ ಮಾಹಿತಿ ನಮೂದಿಸಬೇಕು. ಇಲ್ಲಿ ಎಬಿಹೆಚ್‌ಎ ಪ್ರೊಫೈಲ್ ಸಿದ್ಧವಾಗುತ್ತದೆ.

ಇಲ್ಲಿ ಕುಟುಂಬದ ಇತರ ಸದಸ್ಯರ ಹೆಸರು ಮತ್ತು ಮಾಹಿತಿ ವಿವರವನ್ನು ಕೂಡ ನಮೂದಿಸಬಹುದು. ಈ ರೀತಿ ತುಂಬಿದ ನಂತರ ಜಿಲ್ಲಾಸ್ಪತ್ರೆಗೆ ಬಂದಾಗ ಫಾಸ್ಟ್ ಟ್ರ್ಯಾಕ್​ನಲ್ಲಿರುವ ಕ್ಯೂಆರ್ ಕೋಡ್‌ ಸ್ಕ್ಯಾನ್ ಮಾಡಬೇಕು. ಈ ರೀತಿ ಮಾಡುತ್ತಿದ್ದಂತೆ ಮೊಬೈಲ್‌ಗೆ ಟೋಕನ್ ನಂಬರ್ ಬರುತ್ತದೆ. ಆ ಟೋಕನ್​ ನಂಬರನ್ನು ಪಾಸ್ಟ್​ ಟ್ರ್ಯಾಕ್ ಕೌಂಟರ್‌ನ ಸಿಬ್ಬಂದಿಗೆ ತೋರಿಸಿದರೆ, ಅವರು ಅಲ್ಲಿ ಇರುವ ಪರದೆಯ ಮೇಲೆ ಕಾಣಿಸಿಕೊಳ್ಳುವ ಮಾಹಿತಿಯನ್ನು ಗಮನಿಸುತ್ತಾರೆ. ಇದರಲ್ಲಿ ರೋಗಿ ತಾನು ನೀಡಿದ ವಿವರಗಳು ಸರಿಯಾಗಿವೆ ಎಂದು ತಿಳಿಸಿದರೆ. ಕೌಂಟರ್‌ ಸಿಬ್ಬಂದಿ ರೋಗಿಗೆ ಓಪಿಡಿ ಚೀಟಿ ನೀಡುತ್ತಾರೆ.

ಅದರಲ್ಲಿ ನಮೂದಾಗಿರುವ ವೈದ್ಯರ ಬಳಿ ಚಿಕಿತ್ಸೆಗೆ ತೆರಳಬಹುದು. ಈ ರೀತಿ ಫಾಸ್ಟ್​ ಟ್ರ್ಯಾಕ್‌ನಿಂದ ಪಡೆದ ಚೀಟಿಯನ್ನು ಒಂದು ವರ್ಷದವರೆಗೆ ಬಳಸಬಹುದು. ಪದೇ ಪದೇ ಆಸ್ಪತ್ರೆಗೆ ಬರುವ ರೋಗಿಗಳು ಒಂದು ಸಾರಿ ಈ ರೀತಿ ಮಾಡಿದರೆ ಸಾಕು. ಇಲ್ಲಿಗೆ ಬರುವ ರೋಗಿಗಳು, ರೋಗಿಗಳ ಸಂಬಂಧಿಕರು ಕೌಂಟರ್​ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ಈ ರೀತಿ ಸ್ಕ್ಯಾನ್ ಮಾಡುತ್ತಿದ್ದಂತೆ ರೋಗಿಯ ಅಥವಾ ಸಂಬಂಧಿಸಿದವರು ಮೊಬೈಲಗೆ ಟೋಕನ್ ನಂಬರ್ ಬರುತ್ತೆ. ಈ ಫಾಸ್ಟ್ ಟ್ರ್ಯಾಕ್‌ನಿಂದ ಸರತಿಯಲ್ಲಿ ನಿಲ್ಲದೆ ಓಪಿಡಿ ಚೀಟಿ ಮಾಡಿಸಬಹುದಾಗಿದೆ.

ಈ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಕೊಂಡರೆ ಸರ್ಕಾರದ ಆರೋಗ್ಯ ಸಂಬಂಧಿ ಯೋಜನೆಗಳ ಕುರಿತಂತೆ ನಿಮ್ಮ ಮೊಬೈಲ್ ಕಾಲ ಕಾಲಕ್ಕೆ ಸೂಚನೆಗಳು ಬರುತ್ತವೆ. ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅನಿವಾರ್ಯತೆ ಇಲ್ಲ. ವೈಯಕ್ತಿಕವಾಗಿ ಆರೋಗ್ಯ ಸಂಬಂಧಿಸಿದ ಅಂಶಗಳನ್ನು ಕಾಪಾಡಿಕೊಳ್ಳಬಹುದು. ಯಾವಾಗ ಬೇಕಾದರೂ, ಎಲ್ಲಿಯಾದರೂ ಈ ಮಾಹಿತಿ ನೀಡಿ ಚಿಕಿತ್ಸೆ ಪಡೆಯಬಹುದು.

ಜಾಗೃತಿ ಮೂಡಿಸಬೇಕಿದೆ: ವಿಪರ್ಯಾಸ ಎಂದರೆ ಜಿಲ್ಲಾಸ್ಪತ್ರೆಯಲ್ಲಿರುವ ಈ ಸೌಲಭ್ಯ ಪಡೆಯಲು ರೋಗಿಗಳು ಮುಂದೆ ಬರುತ್ತಿಲ್ಲ. ಪರಿಣಾಮ ಜಿಲ್ಲಾಸ್ಪತ್ರೆಯ ಹೋರರೋಗಿಗಳ ಚೀಟಿ ಮಾಡಿಸುವ ವಿಭಾಗ ಜನಜಂಗುಳಿಯಿಂದ ಕೂಡಿರುತ್ತದೆ. ಆಸ್ಪತ್ರೆಗೆ ಬಂದು ಈ ರೀತಿ ಸೌಲಭ್ಯ ಪಡೆದವರು ಈ ಯೋಜನೆ ಬಗ್ಗೆ ಬೇರೆ ರೋಗಿಗಳಿಗೆ ತಿಳಿಸಬೇಕು. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಅನಿವಾರ್ಯತೆ ಇರುವುದಿಲ್ಲ. ಬೇಗ ಬಂದು ಆಸ್ಪತ್ರೆಯಲ್ಲಿ ವೈದ್ಯರಿಗೆ ತೋರಿಸಿ ಬೇರೆ ಕೆಲಸಗಳಿಗೆ ತೆರಳಬಹುದು ಎನ್ನುತ್ತಾರೆ ಜಿಲ್ಲಾಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಪರಮೇಶ ಹಾವನೂರು.

ಇದನ್ನೂ ಓದಿ:ಕರ್ನಾಟಕ ಬಜೆಟ್​ 2023: ಬಜೆಟ್​ನಲ್ಲಿ ಗ್ರಾಮೀಣಾವೃದ್ಧಿ ಕ್ಷೇತ್ರಕ್ಕೆ ಭರಪೂರ ಕೊಡುಗೆ

Last Updated : Feb 18, 2023, 1:57 PM IST

ABOUT THE AUTHOR

...view details