ರಾಣೆಬೆನ್ನೂರು: ಮಿನಿ ವಿಧಾನಸೌಧದ ಆವರಣದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಉಪನೋಂದಣಾಧಿಕಾರಿ ಕಚೇರಿಯನ್ನು ಮಿನಿ ವಿಧಾನಸೌಧದಿಂದ ಬೇರೆ ಸ್ಥಳಕ್ಕೆ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಒಂದು ವೇಳೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಸಿಗಲಿ ಎಂದು ಕಳೆದ 17 ವರ್ಷಗಳ ಹಿಂದೆ ಆಗಿನ ಸರ್ಕಾರ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿ, ಇದರಿಂದ ಸಾರ್ವಜನಿಕರಿಗೆ ಸಮಯ ವ್ಯಯ, ಆರ್ಥಿಕ ಹೊಣೆ ಕಡಿಮೆಯಾಗಲಿ ಎಲ್ಲ ವರ್ಗದವರಿಗೂ ಅನುಕೂಲವಾಗಲಿ ಎಂದು ಒಂದೇ ಕಡೆ ಎಲ್ಲ ಕಚೇರಿಗಳನ್ನು ತೆರೆದಿದ್ದಾರೆ ಎಂದರು.
ಜನ ಜಂಗುಳಿ, ಕೊರೊನಾ ಸೋಂಕು ಹರಡುವ ಭೀತಿ ಹುಟ್ಟಿಸಿ ಸುಳ್ಳು ನೆಪವೊಡ್ಡಿ ಉಪನೋಂದಣಾಧಿಕಾರಿ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಳಿಸುವುದರ ಹಿಂದೆ ಅಧಿಕಾರಿಗಳ ಸ್ವಹಿತಾಸಕ್ತಿ ಅಡಗಿದೆ. ಅಧಿಕಾರಿಗಳು ಈ ಕಚೇರಿ ಸ್ಥಳಾಂತರ ನಿರ್ಧಾರವನ್ನು ಹಿಂದೆ ಪಡೆಯಬೇಕು. ಇಲ್ಲದಿದ್ದರೆ ತಹಶೀಲ್ದಾರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಮಿನಿ ವಿಧಾನ ಸೌಧದೊಂದಿಗೆ ಉಪನೋಂದಣಾಧಿಕಾರಿ ಕಚೇರಿ ಹೊಂದಿಕೊಂಡಿವೆ. ಇದ್ದಕ್ಕಿಂದಂತೆ ನಗರದಲ್ಲಿ ಮಾತ್ರ ಬೇರೆ ಕಡೆ ಸ್ಥಳಾಂತರ ಮಾಡಲು ಹೊರಟಿರುವುದು ಯಾವ ಪುರುಸಾರ್ಥಕ್ಕೆ ಎಂದು ಆರೋಪಿಸಿದರು. ನಂತರ ತಹಶೀಲ್ದಾರ್ ಬಸನಗೌಡ ಕೋಟೂರ ಅವರಿಗೆ ಮನವಿ ಸಲ್ಲಿಸಿದರು.